ಕಲಬುರಗಿ: ಹೆಚ್ಚುವರಿಯಾಗಿ ಮೂವರು ಉಪಮುಖ್ಯಮಂತ್ರಿ ನೇಮಕ ಮಾಡುವ ವಿಚಾರ ಹೈಕಮಾಂಡ್ ಮುಂದೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೇ ಕೇಳಿ ಎಂದ ಅವರು, ಹೆಚ್ಚುವರಿ ಡಿಸಿಎಂ ವಿಚಾರವಾಗಿ ನಮ್ಮ ಮುಂದೆ ಪ್ರಸ್ತಾವನೆ ಇಲ್ಲ.
ಹೆಚ್ಚುವರಿ ಡಿಸಿಎಂ ನೇಮಕ ಉಹಾಪೋಹ ಚುನಾವಣಾ ಸಂದರ್ಭದಲ್ಲಿ ಇಂತಹ ವಿಚಾರ ಚರ್ಚೆಗೆ ಬರಬಾರದು. ಸದ್ಯಕ್ಕೆ ಸರ್ಕಾರ ನಡೆಸುವ ಕಡೆ, ಸಮಸ್ಯೆ ಕಡೆ ಗಮನ ಕೊಡಬೇಕು. ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಕಡೆಗೆ ಗಮನ ಕೊಡಬೇಕು. ನಮ್ಮ ಗುರಿ ಮುಟ್ಟುವವರೆಗೆ ಇಂತಹದ್ದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಕರ್ನಾಟಕದ ಅಭ್ಯರ್ಥಿಗಳ ಆಯ್ಕೆಗೆ ವಿಚಾರವಾಗಿ ನಾಳೆ ಸಭೆ ನಡೆಯಲಿದೆ. ಯಾರನ್ನು ಕಣಕ್ಕಿಳಿಸಬೇಕು ಎಂದು ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಇಂಡಿಯಾ ಒಕ್ಕೂಟ ಒಟ್ಟಾಗಿ ಹೋಗುವ ನಿರ್ಣಯ ಕೈಗೊಂಡಿದ್ದೇವೆ. ಬುಧವಾರ ದೆಹಲಿಯಲ್ಲಿ ಅನೇಕ ಘಟಕಗಳ ಸಭೆ ಕೂಡ ಕರೆದಿದ್ದೇವೆ. ಈಗಾಗಲೇ ಎಲ್ಲಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಮೊದಲು ನಾವು ನಮ್ಮ ಅಕ್ಕ-ಪಕ್ಕ ರಾಷ್ಟ್ರಗಳ ಜೊತೆಗೆ ಚೆನ್ನಾಗಿರಬೇಕು. ಕೆಟ್ಟ ಪರಿಸ್ಥಿತಿ ಬಂದಾಗ ನಾವು ಹೋರಾಟಕ್ಕೂ ಸಿದ್ದರಾಗಬೇಕಾಗುತ್ತದೆ. ಇಂದಿರಾಗಾಂಧಿ ಯಾವ ರೀತಿ ಪಾಕಿಸ್ತಾನವನ್ನು ಬೇರ್ಪಡಿಸಿ ಬಾಂಗ್ಲಾದೇಶ ನಿರ್ಮಾಣ ಮಾಡಿದರೋ ಅಂತಹ ಹೋರಾಟ ಮಾಡಬೇಕಾಗುತ್ತದೆ. ಅಂತರಾಷ್ಟ್ರೀಯ ಪಾಲಿಸಿ ವಿಚಾರದಲ್ಲಿ ಮೋದಿಯವರು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಯಾವಾಗ ಯಾರನ್ನು ಬೇಕಾದರೂ ತಬ್ಬಿಕೊಳ್ಳುತ್ತಾರೆ, ಯಾರನ್ನು ಬೇಕಾದರೂ ತೆಗಳುತ್ತಾರೆ. ನಾವು ನಮ್ಮ ಅಕ್ಕ-ಪಕ್ಕದವರನ್ನು ಬದಲಾಯಿಸಲಾಗುವುದಿಲ್ಲ. ಹಾಗಾಗಿ ಅವರೊಂದಿಗೆ ಚೆನ್ನಾಗಿರಬೇಕು. ನಾವು ಒಂದಾಗಿ ಹೋಗಬೇಕು. ಅವರು ನಮ್ಮ ಮೈಮೇಲೆ ಬಂದಾಗ ದೇಶಕ್ಕಾಗಿ ಹೋರಾಟಕ್ಕೂ ಸಿದ್ದರಾಗಬೇಕಾಗುತ್ತದೆ ಎಂದರು.