ಬೆಂಗಳೂರು: ಪುರಿಯ ಶ್ರೀ ಜಗನ್ನಾಥ ದೇವಸ್ಥಾನದಲ್ಲಿರುವ ಶ್ರೀ ಮಂದಿರ ಪರಿಕ್ರಮವು ಜನವರಿ 17ರಂದು ಭಕ್ತರಿಗಾಗಿ ತೆರೆಯಲಿದೆ. ಇದು ದೇವಾಲಯದ ಜೀರ್ಣೋದ್ಧಾರ ಯೋಜನೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಸೂಚನೆಯಾಗಿದೆ.
ಉದ್ಘಾಟನೆಯು ಮೇಘನಾದಪಚೇರಿಯ ಸುತ್ತಲಿನ 75 ಮೀಟರ್ ಕಾರಿಡಾರ್, ದೇವಾಲಯದ ಹೊರ ಆವರಣ ಗೋಡೆಯನ್ನು ಪವಿತ್ರಗೊಳಿಸಲಿದೆ. ಪರಿಕ್ರಮದ ಸಮಯದಲ್ಲಿ ಸ್ಥಳಾವಕಾಶದ ಕೊರತೆಯ ಕಾರಣ ಭಕ್ತರು ಎದುರಿಸುವ ತೊಂದರೆಗಳನ್ನು ಇದು ಪರಿಹರಿಸುತ್ತದೆ.
ಈ ಯೋಜನೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಜನವರಿ 12ರಂದು ಪೂರ್ಣಾಹುತಿ ಆರತಿಯೊಂದಿಗೆ ಆರಂಭಗೊಂಡು, ಜನವರಿ 17ರಂದು ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಗಜಪತಿ ಮಹಾರಾಜ ಶ್ರೀ ದಿಬ್ಯಸಿಂಗ ದೇಬ್ ಅವರು ಸಮಾರಂಭದ ಕರ್ತ ಆಗಿರುತ್ತಾರೆ. ಉದ್ಘಾಟನೆಯ ಸಮಯದಲ್ಲಿ, ವೇದಾಂಗಪಂಡಿತರು ಸಿಂಘದ್ವಾರ, ಹಸ್ತಿದ್ವಾರ, ವ್ಯಾಘ್ರದ್ವಾರ ಮತ್ತು ಅಸ್ವದ್ವಾರ ಎಂಬ ನಾಲ್ಕು ದ್ವಾರಗಳಲ್ಲಿ (ದೇವಾಲಯದ ದ್ವಾರಗಳು) ಮಂತ್ರಗಳನ್ನು ಪಠಿಸುತ್ತಾರೆ. ಪ್ರತಿ ದ್ವಾರದಲ್ಲಿ 15 ಪಂಡಿತರು ಇರುತ್ತಾರೆ.
ದೇಶದ ನಾನಾ ಭಾಗಗಳಿಂದ ಧರ್ಮಗುರುಗಳು, ಸಂತರು, ಧಾರ್ಮಿಕ ಮುಖಂಡರು ಉದ್ಘಾಟನೆಗೆ ಆಗಮಿಸಲಿದ್ದಾರೆ. ಯಜ್ಞ ಸ್ಥಳದಲ್ಲಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿಯವರು ವಿಶೇಷ ಸಾನ್ನಿಧ್ಯ ವಹಿಸುವರು.ಪುರಿಯ ಗೌರವಾನ್ವಿತ ಕಲೆಕ್ಟರ್ ಮತ್ತು ಜಿಲ್ಲಾಧಿಕಾರಿಗಳಾದ ಸಮರ್ಥ ವರ್ಮಾ ಐಎಎಸ್, “ಭಗವಾನ್ ಜಗನ್ನಾಥ ಮಂದಿರದಲ್ಲಿ ಶ್ರೀ ಮಂದಿರ ಪರಿಕ್ರಮದ ಉದ್ಘಾಟನೆಯು ಶ್ರೀ ಮಂದಿರದ ಅನಾದಿ ಕಾಲದ ಪರಂಪರೆ ಮತ್ತು ಆಧ್ಯಾತ್ಮಿಕ ವೈಭವದ ಆಚರಣೆಯಾಗಿದೆ.
ಉದ್ಘಾಟನಾ ಸಮಾರಂಭವು ಸಂಪ್ರದಾಯ ಮತ್ತು ಆಧುನಿಕತೆಯ ಭವ್ಯವಾದ ಸಮ್ಮಿಲನವಾಗಿದ್ದು, ಅದನ್ನು ವೀಕ್ಷಿಸಲು ಜಗತ್ತಿಗೆ ಅವಕಾಶ ಒದಗಿಸಲಾಗಿದೆ ಮತ್ತು ಪ್ರಪಂಚದಾದ್ಯಂತ ಇರುವ ಭಕ್ತರಿಗೆ ಗಾಢವಾದ ಆಧ್ಯಾತ್ಮಿಕ ಸಂಪರ್ಕವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.