ಮೈಸೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಹ್ವಾನಿಸಲಾಗಿದೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಲಲ್ಲಾ ಪ್ರಾಣ ಪ್ರತಿಷ್ಠದಲ್ಲಿ ಭಾಗಿಯಾಗುತ್ತಿರುವುದು ನನ್ನ ಸೌಭಾಗ್ಯ. 500 ವರ್ಷಗಳ ನಂತರ ರಾಮಮಂದಿರ ನಿರ್ಮಾಣವಾಗಿದೆ. ಇದು ತುಂಬಾ ಖುಷಿಯ ವಿಚಾರ. ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಅವರು ನಮ್ಮ ಮೈಸೂರಿನವರು. ಅವರಿಗೆ ಅಭಿನಂದನೆ ತಿಳಿಸುವೆ. ರಾಮಲಲ್ಲಾ ಮೂರ್ತಿ ಕೆತ್ತಿರುವುದು ಮೈಸೂರಿಗರಿಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಅರುಣ್ ಯೋಗಿರಾಜ್ ಅವರು ಈ ಹಿಂದೆ ಶಂಕರಾಚಾರ್ಯರ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ವಿಗ್ರಹ ಕೆತ್ತನೆ ಮಾಡಿದ್ದರು. ಇದೀಗ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿದ್ದಾರೆ. ಅಯೋಧ್ಯೆ ಈ ಹಿಂದೆಯೂ ಪವಿತ್ರ ಧಾರ್ಮಿಕ ಕ್ಷೇತ್ರವಾಗಿತ್ತು. ಈಗಲೂ ಅದು ಅದೇ ರೀತಿ ಮುಂದುವರಿಯಲಿದೆ. ಇದು ಎಲ್ಲರಿಗೂ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.