ದೆಹಲಿ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಮಾತೃಪಕ್ಷ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ದೆಹಲಿಯಲ್ಲಿಂದು ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಶೆಟ್ಟರ್ ದೆಹಲಿ ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ರಾಷ್ಟ್ರೀಯ ಪ್ರಮುಖರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಇದುವರೆಗೂ ತಮಗೆ ಬಿಜೆಪಿಯಲ್ಲಿ ಅವಮಾನವಾಗಿದೆ. ಯಾವುದೇ ಕಾರಣಕ್ಕು ಬಿಜೆಪಿಗೆ ಮರಳುವುದಿಲ್ಲ ಎಂದು ಹೇಳುತ್ತಿದ್ದ ಶೆಟ್ಟರ್ ಅವರು ಇದೀಗ ದಿಢೀರ್ ಎಂದು ಬಿಜೆಪಿಗೆ ಸೇರ್ಪಡೆಯಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.ಪಕ್ಷ ಸೇರ್ಪಡೆಗು ಮುನ್ನ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ವರಿಷ್ಠ ಕೇಂದ್ರ ಗೃಹಸಚಿವ ಅಮಿತ್ ಶಾ ನಿವಾಸದಲ್ಲಿ ಬಹಳ ಹೊತ್ತಿನ ಕಾಲ ಚರ್ಚೆ ನಡೆಸಿದ ಶೆಟ್ಟರ್ ಮಾತುಕತೆ ನಂತರ ಪಕ್ಷದ ಕಚೇರಿಗೆ ಆಗಮಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿರುವ ಬಿ.ವೈ ವಿಜಯೇಂದ್ರ ಶೆಟ್ಟರ್ ಪಕ್ಷ ಸೇರ್ಪಡೆಯಿಂದ ಪಕ್ಷಕ್ಕೆ ಬಲಬಂದಂತಾಗಿದೆ. ಶೆಟ್ಟರ್ ಮರು ಸೇರ್ಪಡೆಗೆ ಅಮಿತ್ ಶಾ ಸಂತಸ ವ್ಯಕ್ತಪಡಿಸಿದರು ಎಂದು ಹೇಳಿದ್ದಾರೆ.ಇದೇ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಮುಖಂಡ ಭೂಪೇಂದ್ರ ಯಾದವ್ ಪಕ್ಷ ಸೇರ್ಪಡೆಗೊಂಡ ಶೆಟ್ಟರ್ ನಿರ್ಧಾರವನ್ನು ಸ್ವಾಗತಿದರು.