ಬೆಂಗಳೂರು: ವಿಧಾನಪರಿಷತ್ಗೆ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್ ಕಣಕ್ಕಿಳಿಯಲಿದ್ದಾರೆ ಎಂದು ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ನಾರಾಯಣ ತಿಳಿಸಿದ್ದಾರೆ.
ಈ ಸಂಬಂಧ ಜೆಡಿಎಸ್ – ಬಿಜೆಪಿ ಜೊತೆಯಾಗಿ ಚುನಾವಣೆ ಸಿದ್ದತೆ ಸಭೆ ಮಾಡಿದ್ದೇವೆ ಎಂದು ಹೇಳಿರುವ ಅವರು, ಈ ಸಭೆಯಲ್ಲಿ ಜೆಡಿಎಸ್ನ ಎಪಿ ರಂಗನಾಥ್ ಕೂಡ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ. ಬಿಜೆಪಿ ಪಕ್ಷದ ಹಿರಿಯ ನಾಯಕ ನಾರಾಯಣಸ್ವಾಮಿ ಕೂಡ ಅಭ್ಯರ್ಥಿಯಾಗಲು ಬಯಸಿದ್ದರು ನಾಮಪತ್ರ ಕೂಡ ಸಲ್ಲಿಸಿದ್ದರು.
ಅವರಿಗೆ ಪಕ್ಷ ಸೂಚನೆ ಕೊಟ್ಟಿದೆ, ರಂಗನಾಥ್ ಅವರಿಗೆ ಬೆಂಬಲ ಸೂಚಿಸಲು ನಾರಾಯಣಸ್ವಾಮಿ ಅವರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.ಇದೇ ವೇಳೆ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ನಾರಾಯಣಸ್ವಾಮಿ ಮಾತನಾಡಿ, ಬಿಜೆಪಿಯಲ್ಲಿ ಮೂರು ದಶಕಗಳಿಂದ ಕೆಲಸ ಮಾಡಿದ್ದೇನೆ. ಈಗ ಪಕ್ಷದ ನಿರ್ಧಾರಕ್ಕೆ ನಾನು ಬದ್ದ. ನಾಮಪತ್ರ ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ. ಯಾವುದೇ ಕಾರಣಕ್ಕು ಕಾಂಗ್ರೆಸ್ನ ಪುಟ್ಟಣ್ಣ ಅವರಿಗೆ ಕ್ಷೇತ್ರ ಬಿಟ್ಟುಕೊಡಲ್ಲ .ಪುಟ್ಟಣ್ಣ ಅವರ ಕುತಂತ್ರ ಎಲ್ಲ ಶಿಕ್ಷಕರಿಗೂ ಗೊತ್ತಿದೆ ಎಂದ ಅವರು, ಸ್ವತಂತ್ರ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದೆ ಈಗ ವಾಪಸ್ ಪಡೆದು ಎಪಿ ರಂಗನಾಥ್ ಅವರಿಗೆ ಬೆಂಬಲ ನೀಡುತ್ತೇನೆ ಎಂದರು.