ನವದೆಹಲಿ: ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ರಾಜ್ಯ ಬಜೆಟ್ ಮಂಡನೆಯ ಬಳಿಕ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಬಜೆಟ್ ಕೂಡ ಒಂದು ಶ್ವೇತಪತ್ರವೇ ಆಗಿದೆ.
ಆದರೂ ನಾವು ಶ್ವೇತಪತ್ರ ಹೊರಡಿಸುತ್ತೇವೆ ಎಂದು ಅವರು ಹೇಳಿದರು. ಯುಪಿಎ ಅವಧಿಯ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇವೆ ಎಂಬ ಬಿಜೆಪಿ ಸರ್ಕಾರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೆಯೇ ಸೆಸ್, ಸರ್ಚಾರ್ಜ್ ಬಗ್ಗೆಯೂ ಹೊರಡಿಸಲಿ ಎಂದರು.
ದೆಹಲಿಯಲ್ಲಿಂದು ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಆರಂಭಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಅಷ್ಟೆ. ಇದು ರಾಜಕೀಯ ಚಳವಳಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಎಲ್ಲ ಶಾಸಕರು, ಸಚಿವರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದು ರಾಜಕೀಯ ಹೋರಾಟ ಅಲ್ಲ ಎಂದಿರುವ ಅವರು, ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಎಸಗಿದೆ. ಈ ವಿಚಾರದಲ್ಲಿ ಕರ್ನಾಟಕಕ್ಕೆ ದೊಡ್ಡಅನ್ಯಾಯ ಆಗಿದೆ. ರಾಜ್ಯಕ್ಕಾದ ಅನ್ಯಾಯದ ವಿರುದ್ಧ ಹೋರಾಟ ಮಾಡ್ತಿದ್ದೇವೆ.
ರಾಜ್ಯದ ಸಂಸದರಿಗೂ ಪತ್ರ ಬರೆದು ಮನವಿ ಮಾಡಿದೆ. ಇದು ಐತಿಹಾಸಿಕವಾದ ಚಳವಳಿ.ಸುಮಾರು ಶೇ 40-45 ರಷ್ಟು ತೆರಿಗೆ ಪಾಲು ನಮಗೆ ಬರಬೇಕು. ನಾವು 4 ಲಕ್ಷ 30 ಸಾವಿರ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ. 100 ರೂ. ತೆರಿಗೆ ಕಟ್ಟಿದ್ದರೆ ಕೇವಲ 13 ರೂಪಾಯಿ ಅಷ್ಟೇ ನಮಗೆ ಬರುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯಗಳಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ಹೋಗುತ್ತದೆ. ಹಣಕಾಸು ಆಯೋಗ ನಿರ್ಧರಿಸಿದಂತೆ ರಾಜ್ಯಗಳಿಗೆ ಅನುದಾನ ನೀಡಬೇಕು. 14ನೇ ಹಣಕಾಸು ಆಯೋಗದ ನಿಯಮಾನುಸಾರ ರಾಜ್ಯಕ್ಕೆ ಶೇ 42ರಷ್ಟು ಹಣ ನೀಡಬೇಕು. 15ನೇ ಹಣಕಾಸು ಆಯೋಗದ ನಿಯಮಾನುಸಾರ ರಾಜ್ಯಕ್ಕೆ ಶೇ41ರಷ್ಟು ಹಣ ನೀಡಬೇಕು ಎಂದು ಸಿಎಂ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಬರಗಾಲ ಇದೆ. ಐದು ತಿಂಗಳಾದರೂ ಕೇಂದ್ರ ಸರ್ಕಾರ ಇದುವರೆಗೂ ಹಣ ನೀಡಿಲ್ಲ. ನಮ್ಮ ಸಚಿವರು ಕೇಂದ್ರ ಸರ್ಕಾರದ ಮಂತ್ರಿಗಳನ್ನು ಭೇಟಿಯಾದರು. ನಾನೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದೆ. ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಆಗ ಅಮಿತ್ ಶಾ, ಡಿಸೆಂಬರ್ 23 ರಂದು ಸಭೆ ಕರೆದು ನಿರ್ಧಾರ ತೆಗೆದುಕೊಳ್ತೀನಿ ಅಂದರು. ಆದರೆ ಏನೂ ಮಾಡಿಲ್ಲ ಎಂದರು.
ಇಷ್ಟು ದೊಡ್ಡಬರಗಾಲ ರಾಜ್ಯದಲ್ಲಿ ಎಂದೂ ಬಂದಿರಲಿಲ್ಲ. ನಾವು 17 ಸಾವಿರದ 900 ಕೋಟಿ ರೂಪಾಯಿ ಪರಿಹಾರ ಕೇಳಿದ್ದೆವು. ಎಂನರೇಗಾದ ಅಡಿಯಲ್ಲಿ ಕೆಲಸದ ದಿನಗಳನ್ನು 150 ದಿನ ಮಾಡಿ ಅಂತಾ ಕೇಳಿದ್ವಿ. ಅದನ್ನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ದೂರಿದರು.