ಹೊಸಕೋಟೆ: ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸಮ್ಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೊರಳೂರು ಗ್ರಾಮದಲ್ಲಿ 100 ಕೋಟಿ ರೂ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕಸಭಾ ಸದಸ್ಯ ಬಿ.ಎನ್. ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಬಿ.ಎನ್ ಬಚ್ಚೇಗೌಡ ಮಾತನಾಡಿ ಕೇಂದ್ರ ಸಚಿವ ನಿತಿನ್ ಗಡ್ಕರಿ 43 ಕೋಟಿ, ಲೋಕೋಪಯೋಗಿ ಇಲಾಖೆಯಿಂದ 36 ಕೋಟಿ, ಸಣ್ಣ ನೀರಾವರಿ ಇಲಾಖೆಯ 18 ಕೋಟಿ ಅನುದಾನವನ್ನು ಒದಗಿಸಿ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ.
ಹಲವಾರು ದಶಕಗಳಿಂದ ಈ ರಸ್ತೆಯಲ್ಲಿ ಸಂಚಾರ ಮಾಡುವಂತಹ ವಾಹನ ಸವಾರರಿಗೆ ರೈಲ್ವೆ ಗೇಟ್ ಮುಚ್ಚಲ್ಪಡುವ ಸಂದರ್ಭದಲಿ ಸಾಕಷ್ಟು ಕಿರಿಕಿರಿ ಉಂಟಾಗುತ್ತಿತ್ತು. ಟ್ರಾಫಿಕ್ ನಲ್ಲಿ ನಿಂತು ಸಮಯವನ್ನ ಕಳೆಯುವಂತಾಗಿತ್ತು. ಮೇಲ್ಸೇತುವೆ ನಿರ್ಮಾಣವಾದ ನಂತರ ಈ ರೀತಿಯ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗಲಿದ್ದು ಈ ಭಾಗದ ಗ್ರಾಮಗಳು ಸಹ ಅಭಿವೃದ್ಧಿಯತ್ತ ಸಾಗಲಿವೆ ಎಂದು ತಿಳಿಸಿದರು.
ಕ್ಷೇತ್ರದ ಅಭಿವೃದ್ದಿಗೆ ನೂರಾರು ಕೋಟಿಅನುದಾನ ತರೋದು ಸಾಮಾನ್ಯ ವಿಷಯ ವಲ್ಲ. ಆದರೆ ಶಾಸಕ ಶರತ್ ಬಚ್ಚೇಗೌಡರು ಕ್ಷೇತ್ರದ ಅಭಿವೃದ್ದಿ ದೃಷ್ಠಿಯಿಂದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನಡುವೆ ನಿರಂತರ ಚರ್ಚಿಸಿ 100 ಕೋಟಿ ರೂ.ಗಳ
ಅನುದಾನವನ್ನು ಏಕಕಾಲಕ್ಕೆ ತರುವ ಮೂಲಕ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ಕೊಟ್ಟಿರುವುದು ಅಭಿವೃದ್ದಿಗೆ ಹಿಡಿದ ಕೈಗನ್ನಡಿಯಾಗಿದೆ.
ಎರಡು ಭಾರಿ ಶಾಸಕರಾಗಿ ಕ್ಷೇತ್ರದ ಜನ ಆಯ್ಕೆ ಮಾಡಿದ ಪರಿಣಾಮವಾಗಿ ಅಭಿವೃದ್ದಿಯ ಮುನ್ನೋಟ ನೋಡಲು ಸಾಧ್ಯವಾಗಲಿದೆ. ಶರತ್ ದೂರದೃಷ್ಠಿಯನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಪ್ರಶಂಸೆ ವ್ಯಕ್ತಪಡಿಸಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ ಕೊರಳೂರು ಗ್ರಾಮ ಹೊಸಕೋಟೆಯಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 207 ಜೊತೆಗೆ ಬೆಂಗಳೂರಿನ ನಗರಕ್ಕೆ ಕೂಗಳತೆ ದೂರದಲ್ಲಿರುವ ಕಾರಣ ವಾಣಿಜ್ಯೇತರವಾಗಿ ಸಹ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಪ್ರಮುಖವಾಗಿ ದಿನದಿಂದ ದಿನಕ್ಕೆ ವಾಹನ ಸಂಚಾರ ಸಂಖ್ಯೆ ಸಹ ಹೆಚ್ಚಾಗಿದ್ದು ಪ್ರತಿದಿನ ಬೆಂಗಳೂರಿನಿಂದ ಬಂಗಾರಪೇಟೆ, ಕೆಜಿಫ್, ಮಾರಿಕುಪ್ಪಂ ಹಾಗೂ ತಮಿಳುನಾಡು ಭಾಗಗಳಿಗೆ 175 ಟ್ರಿಪ್ ರೈಲು ಸಂಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ 175 ಬಾರಿ ರೈಲ್ವೆ ಗೇಟ್ ಹಾಕಿದ ಸಮಯದಲ್ಲಿ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿತ್ತು ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು.
ಈ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ಕೊಡಿಸಬೇಕೆನ್ನುವ ಉದ್ದೇಶದಿಂದ ಕೇಂದ್ರ ಸಚಿವರು ಹಾಗೂ ರಾಜ್ಯ ಸರ್ಕಾರದ ಜೊತೆ ಮನವಿ ಮಾಡಿ 100 ಕೋಟಿ ರೂ.ಗಳ ಅನುದಾನವನ್ನ ತಂದು ರೈಲ್ವೆ ಮೇಲ್ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಸಮ್ಮೇತನಹಳ್ಳಿ ಲಕ್ಷ್ಮಣಸಿಂಗ್, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರಾದ ಕೆಎಂಎಂ ಮಂಜುನಾಥ್, ಎನ್. ಮಂಜುನಾಥ್, ಗ್ರಾಮ ಪಂಚಾಯತಿ ಅಧ್ಯಕ್ಷ ನಡವತ್ತಿ ಕಾಂತರಾಜು, ಟಿಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ನಿರ್ದೇಶಕ ಆನಂದಾಚಾರಿ, ಮುಖಂಡರಾದ ಕೋಡಿಹಳ್ಳಿ ಸೊಣ್ಣಪ್ಪ, ಬೋಧನಹೊಸಹಳ್ಳಿ ಪ್ರಕಾಶ್, ಕೊರಳೂರು ಸುರೇಶ್, ಮಲ್ಲಸಂದ್ರ ಶೇಷಪ್ಪ, ಸಮೇತನಹಳ್ಳಿ ಸೊಣ್ಣಪ್ಪ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.