ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಭಾನುವಾರ ವಿನ್ಫಾಸ್ಟ್ ಆಟೋ ಲಿಮಿಟೆಡ್ನ ಎಲೆಕ್ಟ್ರಿಕ್ ಕಾರ್ ಮತ್ತು ಬ್ಯಾಟರಿ ತಯಾರಿ ಘಟಕದ ಶಂಕುಸ್ಥಾಪನೆ ನೆರವೇರಿಸಿದರು. ಈ ಮೂಲಕ ಕಂಪನಿಯು ರಾಜ್ಯದಲ್ಲಿ 16,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಿದೆ.
ಜನವರಿಯಲ್ಲಿ ನಡೆದ ಡಿಎಂಕೆ ಸರ್ಕಾರ ಮತ್ತು ಜಾಗತಿಕ ಹೂಡಿಕೆದಾರರ ಸಭೆಯ ಮೊದಲ ಆವೃತ್ತಿಯ ಸಂದರ್ಭದಲ್ಲಿ ವಿಯೆಟ್ನಾಂ ಮೂಲದ ಈ ಇವಿ ತಯಾರಕ ಕಂಪನಿಯು ಸ್ಥಾವರ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರದೊಂದಿಗೆ ತಿಳುವಳಿಕೆ ಪತ್ರಕ್ಕೆ(ಎಂಓಯು) ಸಹಿ ಹಾಕಿತ್ತು.
ಈ ಶಿಲಾನ್ಯಾಸ ಕಾರ್ಯಕ್ರಮವು ತಮಿಳುನಾಡಿನ ಉದ್ಯಮ ಸ್ನೇಹಿ ವಾತಾವರಣಕ್ಕೆ ಸಾಕ್ಷಿಯಾಗಿದೆ. ಎಂಓಯುಗೆ ಸಹಿ ಹಾಕಿದ 50 ದಿನಗಳಲ್ಲಿ ಈ ಕಾರ್ಯಕ್ರಮ ನಡೆದಿದ್ದು, ತ್ವರಿತ ಅನುಮೋದನೆಗಳು ಮತ್ತು ಕಾರ್ಯಕ್ಷಣತೆ ಕುರಿತಾದ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಆರಂಭಿಕ ಹಂತದಲ್ಲಿ, ವಿನ್ಫಾಸ್ಟ್ ಆಟೋ ಲಿಮಿಟೆಡ್ 4,000 ಕೋ. ರೂ.ಗಳನ್ನು ಹೂಡಿಕೆ ಮಾಡಲಿದ್ದು, ಇದು ಟ್ಯುಟಿಕೋರಿನ್ ಪ್ರದೇಶದಲ್ಲಿ 3,500 ಉದ್ಯೋಗಗಳನ್ನು ಸೃಷ್ಟಿಸಲಿದೆ. ಸ್ಥಾವರವು ಕಾರ್ಯಾರಂಭ ಮಾಡಿದ ನಂತರ 1.50 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಲಿದೆ.
“ತಮಿಳುನಾಡು ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2024ರ ಎಂಒಯುಗಳು ದಕ್ಷಿಣ ತಮಿಳುನಾಡಿಗೆ ಮಹತ್ವದ ಮೈಲಿಗಲ್ಲಾಗಿದ್ದು, ಅವುಗಳು ಅತಿ ಕ್ಷಿಪ್ರ ಸಮಯದಲ್ಲಿ ಉದ್ಯೋಗಗಳಾಗಿ ಪರಿವರ್ತನೆಯಾಗುತ್ತಿವೆ” ಎಂದು ಭೂಮಿಪೂಜೆ ಸಮಾರಂಭದಲ್ಲಿ ಭಾಗವಹಿಸಿದ್ದ ಕೈಗಾರಿಕಾ ಸಚಿವ ಟಿ ಆರ್ ಬಿ ರಾಜಾ ಹೇಳಿದರು.
“ಮುಖ್ಯಮಂತ್ರಿಯವರು ಟ್ಯುಟಿಕೋರಿನ್ನಲ್ಲಿ ವಿನ್ಫಾಸ್ಟ್ ಇವಿ ಕಾರ್ಖಾನೆಗೆ ಭೂಮಿಪೂಜೆ ಮಾಡುವ ಮೂಲಕ ದಕ್ಷಿಣ ತಮಿಳುನಾಡು ಸಮೃದ್ಧ ಅಭಿವೃದ್ಧಿ ಪ್ರಯಾಣವನ್ನು ಆರಂಭಿಸಿದೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೆÇೀಸ್ಟ್ ಮೂಲಕ ತಿಳಿಸಿದ್ದಾರೆ.