ಲೈನ್ ಮ್ಯಾನ್ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಮಾರ್ಚ್ 15ಕ್ಕೆ ಚಿತ್ರ ಥಿಯೇಟರ್ ಗೆ ಲಗ್ಗೆ ಇಡುತ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಮೋಷನ್ ಪೋಸ್ಟರ್ ರಿಲೀಸ್ ಮಾಡಿ ನಿರೀಕ್ಷೆ ಹೆಚ್ಚಿಸಿರುವ ಲೈನ್ ಮ್ಯಾನ್ ಸಿನಿಮಾ ಅಂಗಳದಿಂದ ಮೊದಲ ಹಾಡು ಅನಾವರಣಗೊಂಡಿದೆ.
ಧರೆಗೆ ದೊಡ್ಡವರು ಎಂಬ ಜಾನಪದ ಹಾಡು ಬಿಡುಗಡೆಯಾಗಿದ್ದು, ನಿಂಗಶೆಟ್ಟಿ, ನಿಂಗರಾಜು ಕೆ ಕಲ್ಲಪ್ಪ ಹಾಗೂ ಶಂಕರ್ ಧ್ವನಿಯಾಗಿರುವ ಅರ್ಥಪೂರ್ಣ ಗೀತೆಗೆ ಕದ್ರಿ ಮಣಿಕಾಂತ್ ಟ್ಯೂನ್ ಹಾಕಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿಯೂ ಹಾಡು ಬಿಡುಗಡೆಯಾಗಿದೆ.
ವಿದ್ಯುತ್ ಇಲಾಖೆಗಳಲ್ಲಿ ಕೆಲಸ ಮಾಡುವ ಲೈನ್ ಮ್ಯಾನ್ಗಳದ್ದು ಯಾವಾಗಲೂ ಕಷ್ಟ ಕೆಲಸ. ಅದರಲ್ಲೂ ಮಳೆಗಾಲದ ಸಮಯದಲ್ಲಂತೂ ಜೀವವನ್ನು ಪಣಕ್ಕಿಟ್ಟು ಅವರು ಕೆಲಸ ಮಾಡುತ್ತಾರೆ. ಅಂತಹ ಕಥೆಯೇ ಲೈನ್ ಮ್ಯಾನ್ ಸಿನಿಮಾ. ರಘು ಶಾಸ್ತ್ರಿ ಸಾರಥ್ಯದಲ್ಲಿ ಚಿತ್ರ ಮೂಡಿ ಬಂದಿದೆ.
ಯುವ ನಟ ತ್ರಿಗುಣ್ ಅವರು ಲೈನ್ ಮ್ಯಾನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಜಲ್ ಕುಂದರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯ ಮೂರನೇ ಚಿತ್ರ ಇದಾಗಿದೆ. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.
ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ, ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ. ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ಲೈನ್ ಮ್ಯಾನ್ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ.
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಲೈನ್ ಮ್ಯಾನ್ ಸಿನಿಮಾ ಪ್ರದರ್ಶನವಾಗುತ್ತಿರುವುದು ವಿಶೇಷ. ನಾಳೆ ಮತ್ತು ಚಿತ್ರೋತ್ಸವದ ಕೊನೆಯ ದಿನವಾದ ಮಾರ್ಚ್ 7ರಂದು ಲೈನ್ ಮ್ಯಾನ್ ಸ್ಪೆಷಲ್ ಸ್ಕ್ರೀನ್ ಇರಲಿದೆ.