ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಜಿ.ಎಸ್. ಬೆಟ್ಟ ವಲಯದ ಕಾಡಂಚಿನ ಗ್ರಾಮಗಳಾದ ಹಂಗಳ, ಕಲೀಗೌಡನಹಳ್ಳಿ ಮತ್ತು ದೇವರಹಳ್ಳಿ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳುಗಳಿಂದ ಕಾಡಾನೆಯೊಂದು ಲಗ್ಗೆ ಇಟ್ಟು ರೈತರ ಬೆಳೆಗಳನ್ನು ಅಪಾರವಾಗಿ ನಷ್ಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಮೇರೆಗೆ ನಿರಂತರ ಕಾರ್ಯಾಚರಣೆ ಕೈಗೊಂಡು ಪುಂಡಾನೆಯನ್ನು ಸೆರೆಹಿಡಿಯಲಾಯಿತು.
ದುಬಾರೆ ಸಾಕಾನೆ ಶಿಬಿರ ಮತ್ತು ಜಿ.ಎಸ್. ಬೆಟ್ಟ ಹಾಗೂ ಕುಂದುಕೆರೆ ವಲಯದ ವನ್ಯ ಪ್ರಾಣಿ ಹತ್ಯೆ ತಡೆ ಶಿಬಿರದ ಸಿಬ್ಬಂದಿಗಳು, ಸಫಾರಿ ಗೈಡ್ ಗಳು ಮತ್ತು ಲೆಪರ್ಡ್ ಟಾಸ್ಕ್.
ಕುಮ್ಮಿ ಆನೆಗಳಾದ ಈಶ್ವರ, ಕಂಜನ್, ಶ್ರೀರಾಮ, ಲಕ್ಷ್ಮಣ ಹಾಗೂ ರಾಂಪುರ ಆನೆ ಶಿಬಿರದ ರೋಹಿತ್ ಮತ್ತು ಸಾಕಾನೆ ಮೇಲ್ವಿಚರಣಾ ಸಿಬ್ಬಂದಿಗಳನ್ನೊಳಗೊಂಡ ಕಾರ್ಯಾಚರಣೆಯ ತಂಡದ ನಿರಂತರ ಶ್ರಮದೊಂದಿಗೆ ಸೆರೆ ಹಿಡಿಯುವ ಕಾರ್ಯಾಚರಣೆಯು ಯಶಸ್ವಿಯಾಗಿರುತ್ತದೆ.
ಸೆರೆ ಹಿಡಿದ ಕಾಡಾನೆಯು ಸುಮಾರು 40 ವರ್ಷ ವಯಸ್ಸಿನ ಗಂಡಾನೆಯಾಗಿದ್ದು, ಆರೋಗ್ಯಕರವಾಗಿರುತ್ತದೆ ಮತ್ತು ಸೆರೆ ಹಿಡಿದ ಆನೆಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜನಸಮುದಾಯ ಪ್ರದೇಶಕ್ಕೆ ಹತ್ತಿರವಿಲ್ಲದಂತಹ ಅರಣ್ಯಕ್ಕೆ ಸ್ಥಳಾಂತರಿಸಲಾಗಿರುತ್ತದೆ.
ಕಾರ್ಯಾಚರಣೆಯಲ್ಲಿ ಪ್ರಭಾಕರನ್ ಎಸ್., ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಇವರ ನೇತೃತ್ವದಲ್ಲಿ, ಎಂ. ಎನ್. ನವೀನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಉಪವಿಭಾಗ, ಜ್ಞಾನಶೇಖರ್, ಗಜೇಂದ್ರ, ವಿಜಯನ್,. ಕಾರ್ತಿಕ್,. ಗೋಪಾಲಕೃಷ್ಣ ಗಸ್ತು ಅಧಿಕಾರಿಗಳಾದ ಆನಂದ, ಬರಕತ್ ಅಲಿ, ಹಳೇ ಪಟೇಲ್, ಡಾ|| ಮುಜೀಬರ್ ರೆಹಮಾನ್, ಮುಖ್ಯ ಪಶು ವೈದ್ಯಾಧಿಕಾರಿಗಳು, ಮುಖ್ಯ ಪಶು ವೈದ್ಯಾಧಿಕಾರಿಗಳು, ಮೈಸೂರು, ಡಾ|| ಮಿರ್ಜಾ ವಸೀಂ, ಪಶು ವೈದ್ಯಾಧಿಕಾರಿಗಳು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಅಕ್ರಂ ಪಾಷಾ, ದಲಾಯತ್, ಮೈಸೂರು ವನ್ಯಜೀವಿ ವಿಭಾಗ, ರಂಜನ್ ಇತರರು ಭಾಗವಹಿಸಿದ್ದರು.