ಐಪಿಎಲ್ 2026ರ ಸೀಸನ್ ಓಪನರ್ ಗಳಲ್ಲಿ ಸೋಲಿನ ಕಹಿಯುಂಡಿರುವ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇದೀಗ ಮುಖಾಮುಖಿಯಾಗುತ್ತಿವೆ. ಸೋತವರ ನಡುವಿನ ಪಂದ್ಯ ಯಾವತ್ತೂ ತೀವ್ರ ಪೈಪೋಟಿಯಿಂದ ಕೂಡಿರುತ್ತವೆ. ಹೀಗಾಗಿ ಏಪ್ರಿಲ್ 2ರ ಗುರುವಾರದಂದು ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಪಂದ್ಯ ಹೇಗಿರಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಅಭಿಷೇಕ್ ಶರ್ಮಾ ಇದೀಗ ಬ್ಯಾಟರ್ ಗಳ ಸ್ವರ್ಗವಾಗಿರುವ ಈಡನ್ ಗಾರ್ಡನ್ ನಲ್ಲಿ ರನ್ ಹೊಳೆ ಹರಿಸುವುದನ್ನು ಅವರ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.ವಿಶೇಷವೆಂದರೆ ಆರ್ ಸಿಬಿ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಹೈದರಾಬಾದ್ ತಂಡದ ನಾಯಕ ಇಶಾನ್ ಕಿಶನ್ ಮತ್ತು ಮುಂಬೈ ವಿರುದ್ಧ ಪಂದ್ಯದಲ್ಲಿ ಕೋಲ್ಕತಾ ನಾಯಕ ಅಜಿಂಕ್ಯ ರೆಹಾನಿ ಅರ್ಧಶತಕ ಹೊಡೆದು ಮಿಂಚಿದ್ದರು. ಆದರೆ ಉಳಿದವರು ವಿಫಲರಾಗಿದ್ದರಿಂದ ತಂಡಗಳು ಸೋಲು ಕಾಣಬೇಕಾಯಿತು. ಎರಡೂ ತಂಡಗಳು ಇದೀಗ ತಮ್ಮ ಹಿಂದಿನ ಪಂದ್ಯದ ವೈಫಲ್ಯವನ್ನು ಮೆಟ್ಟಿ ನಿಂತು ಜಯಕ್ಕಾಗಿ ಹಂಬಲಿಸುತ್ತಿವೆ.
ಕೋಲ್ಕತಾ ತಂಡಕ್ಕೆ ತವರಿನ ಮೈದಾನದಲ್ಲಿ ಆಡುವ ಅವಕಾಶ ಸಹಜವಾಗಿಯೇ ಹೆಚ್ಚಿನ ಬಲ ತುಂಬಲಿದೆ. ತಂಡ ಆರಂಭಿಕರಾದ ಅಜಿಂಕ್ಯ ರಹಾನೆ ಮತ್ತು ಫಿನ್ ಅಲೆನ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬ್ಯಾಟಿಂಗ್ ಗೆ ಮಾತ್ರ ಲಭ್ಯವಿರುವ ಕ್ಯಾಮರೂನ್ ಗ್ರೀನ್ ಕಳೆದ ಪಂದ್ಯದಲ್ಲಿ ದೊಡ್ಡ ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಈ ಬಾರಿ ತಂಡ ಅವರಿಂದ ದೊಡ್ಡ ಇನ್ನಿಂಗ್ಸ್ ಅನ್ನು ಎದುರು ನೋಡುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ರಿಂಕು ಸಿಂಗ್ ಅವರು ರನ್ ರೇಟ್ ಗೆ ವೇಗ ನೀಡಬೇಕಾದ ಅಗತ್ಯವಿದೆ. ಕೋಲ್ಕತಾ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿ ಕಂಡರೂ ಸೆಟ್ ಆದಂತೆ ಕಾಣುತ್ತಿಲ್ಲ. ಆಧರೆ ರಶೀದ್ ಖಾನ್, ವರುಣ್ ಚಕ್ರವರ್ತಿ ಮತ್ತು ಬ್ಲೆಸ್ಸಿಂಗ್ ಮುಝರಬಾನಿ ಅವರು ಲಯ ಕಂಡುಕೊAಡಲ್ಲಿ ಸನ್ ರೈಸರ್ಸ್ ಬ್ಯಾಟಿಂಗ್ ಪಡೆ ಮುಳುಗುವುದು ಖಚಿತ.ಈಡನ್ ಗಾರ್ಡನ್ಸ್, ಪಿಚ್ ವರದಿ 90ರ ದಶಕದಲ್ಲಿ ಈಡನ್ ಗಾರ್ಡನ್ಸ್ನ ಪಿಚ್ ಬೌಲರ್ ಗಳ ಸ್ವರ್ಗವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಚುಟುಕು ಕ್ರಿಕೆಟ್ ಯುಗದಲ್ಲಿ ಇಲ್ಲಿನ ಪಿಚ್ ನ ಸ್ವರೂಪ ಸಂಪೂರ್ಣ ಬದಲಾಗಿದೆ.
ಸೀಸನ್ ಓಪನರ್ನಲ್ಲಿ ಸೋತವರ ಸಮರ



