ಗುಂಡ್ಲುಪೇಟೆ: ಕಾಡಿನಿಂದ ದಾರಿ ತಪ್ಪಿ ನಾಡಿಗೆ ಬಂದಿದ್ದ ಸುಮಾರು 5-6 ವರ್ಷದ ಕರಡಿಯನ್ನು ಅರಣ್ಯಾಧಿಕಾರಿಗಳು ತಾಲೂಕಿನ ಅಣ್ಣೂರುಕೇರಿ ಗ್ರಾಮದ ಖಾಸಗೀ ಜಮೀನಿನಲ್ಲಿ ಬುಧವಾರ ಸೆರೆ ಹಿಡಿದಿದ್ದಾರೆ.
ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮಕ್ಕೆ ಬುಧವಾರ ಬೆಳಂಬೆಳಗ್ಗೆ ದಾರಿತಪ್ಪಿ ಬಂದ ಕರಡಿಯನ್ನು ಕಂಡ ಜನರು ಆತಂಕಕ್ಕೀಡಾಗಿದ್ದರು. ಈ ವೇಳೆ ಜನರ ಕೂಗಾಟದಿಂದ ಗಾಭರಿಗೊಂಡ ಕರಡಿಯು ಜಮೀನಿನಲ್ಲಿ ಅತ್ತಿಂದಿತ್ತ ಓಡಾಡಿ ನಿತ್ರಾಣಗೊಂಡಿತ್ತು. ನಂತರ ಸ್ಥಳೀಯ ರೈತರಿಂದ ಮಾಹಿತಿ ಅರಿತ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಿಮಿಸಿ ಪರಿಶೀಲನೆ ನಡೆಸಿ, ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಲೆಯ ಮೂಲಕ ಕರಡಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಸೆರೆಯಾದ ಕರಡಿಗೆ ಇಲಾಖಾ ಪಶು ವೈಧ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಚಿಕಿತ್ಸೆ ನೀಡಿದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮೂಲೆಹೊಳೆ ಅರಣ್ಯಕ್ಕೆ ಬಿಟ್ಟಿದ್ದಾರೆ.ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್, ಕುಂದುಕೆರೆ ವಲಯ ಅರಣ್ಯಾಧಿಕಾರಿ ಎನ್.ಪಿ ನವೀನ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ವಿಷೇಶ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಭಾಗವಹಿಸಿದ್ದರು