ಕೋಲಾರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿದ್ದು, ಈ ಬಾರಿ ಜಿಲ್ಲೆಗೆ ಕಳೆದಬಾರಿಗಿಂತಲೂ ಅತ್ಯುತ್ತಮ ಫಲಿತಾಂಶ ಬರುವಂತೆ ಮುಖ್ಯಶಿಕ್ಷಕರು ಜವಾಬ್ದಾರಿ ವಹಿಸಿ ಕೆಲಸ ಮಾಡಿ, ನೀವು ಹೊರತಂದಿರುವ ಕ್ಯಾಲೆಂಡರ್ ನಿಮಗೆ ಶೈಕ್ಷಣಿಕ ಮಾರ್ಗದರ್ಶಿಯಾಗಲಿ. ನಿಮ್ಮ ಕರ್ತವ್ಯ ಬದ್ದತೆಯನ್ನು ನೆನಪಿಸಲಿ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಶೈಕ್ಷಣಿಕ ಅಭಿವೃದ್ದಿಗಾಗಿಯೇ ಕ್ರಿಯಾಯೋಜನೆಯ ಮೂಲಕ ಇಲಾಖೆ ನಿಮಗೆ ವಹಿಸಿರುವ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕರ ಸಂಘದಿಂದ ಅತ್ಯಂತ ಸುಂದರವಾದ ಕ್ಯಾಲೆಂಡರ್ ಮಾಡಿಸಿದ್ದೀರಿ, ಇದು ನಿಮ್ಮ ಶೈಕ್ಷಣಿಕ ಕಾರ್ಯ ಯೋಜನೆಗೆ ಪೂರಕವಾಗಲಿ, ನಿಮ್ಮ ಕರ್ತವ್ಯವನ್ನು ನೆನಪಿಸುವ ಸಾಧನವಾಗಲಿ ಎಂದು ತಿಳಿಸಿ ಶುಭ ಹಾರೈಸಿದರು.
ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ 6ನೇ ಸ್ಥಾನ ಬಂದಿದೆ, ಈ ಬಾರಿ ಕನಿಷ್ಟ 2ನೇ ಸ್ಥಾನದಲ್ಲಾದರೂ ನಾವು ಇರಬೇಕು, ಈ ನಿಟ್ಟಿನಲ್ಲಿ ಇಲಾಖೆ ಕೋಲಾರ ಹಾಲು ಒಕ್ಕೂಟದ ಸಹಕಾರದೊಂದಿಗೆ ಅನೇಕ ಸಂಪನ್ಮೂಲ ಪುಸ್ತಕ ಒದಗಿಸಿದೆ ಎಂದರು.
ಇದರ ನಡುವೆ ಜಿಲ್ಲಾಧಿಕಾರಿ ಅಕ್ರಂಪಾಷಾ ಹಾಗೂ ಜಿಪಂ ಸಿಇಒ ಪದ್ಮಬಸವಂತಪ್ಪ ಅವರು ಹೆಚ್ಚಿನ ಆಸಕ್ತಿ ವಹಿಸ, ಖನಿಜ ಪ್ರತಿಷ್ಠಾನದ ಸಹಕಾರದೊಂದಿಗೆ `ಪರೀಕ್ಷಾ ದೀವಿಗೆ’ ಸಂಪನ್ಮೂಲ ಪುಸ್ತಕ ಒದಗಿಸಿದ್ದಾರೆ, ಅನೇಕ ಸಭೆಗಳನ್ನು ಮಾಡಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಮುಖ್ಯಶಿಕ್ಷಕರಾದವರು ಸಹಶಿಕ್ಷಕರ ಸಹಕಾರದೊಂದಿಗೆ ಈ ಬಾರಿ ಉತ್ತಮ ಫಲಿತಾಂಶ ತರುವಲ್ಲಿ ಪಾತ್ರವಹಿಸಿ, ವಿಶೇಷ ತರಗತಿಗಳ ಮೂಲಕ ಮಕ್ಕಳ ಕಲಿಕೆಗೆ ಒತ್ತು ನೀಡಿ, ಯಾವುದೇ ಮಗು ಅನುತ್ತೀರ್ಣವಾಗಬಾರದು ಎಂಬುದನ್ನು ಅರಿತು ಕೆಲಸ ಮಾಡಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಮಾತನಾಡಿ, ಕ್ಯಾಲೆಂಡರ್ ಜಿಲ್ಲೆಯ ಶಾಲೆಗಳಲ್ಲಿ ಫಲಿತಾಂಶ ಉತ್ತಮಪಡಿಸುವುದನ್ನು ಸದಾ ನೆನಪಿಸುವ ಕಾರ್ಯ ಮಾಡಲಿ, ಮುಖ್ಯಶಿಕ್ಷಕರು ಮತ್ತುಷ್ಟು ಉತ್ತಮವಾಗಿ ಕೆಲಸ ಮಾಡಲು ಪ್ರೇರಣೆ ನೀಡಲಿ ಎಂದು ಆಶಿಸಿ ಶುಭ ಕೋರಿದರು.
ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ ಮಾತನಾಡಿ, ಮುಖ್ಯಶಿಕ್ಷಕರ ಸಂಘದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದೇವೆ, ಡಾ.ರಾಧಾಕೃಷ್ಣನ್ ಹಾಗೂ ಅಕ್ಷರಮಾತೆ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರವನ್ನು ಹಾಕುವ ಮೂಲಕ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿರುವ ಸಾಧನೆಯನ್ನು ಸ್ಮರಿಸುವುದರ ಜತೆಗೆ ಶಿಕ್ಷಕರಿಗೂ ಮತ್ತಷ್ಟುಬದ್ದತೆಯಿಂದ ಕೆಲಸ ಮಾಡಲು ಪ್ರೇರಣೆ ಸಿಗಲಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಶಂಕರೇಗೌಡ, ಸುಭಾಷ್ ಪ್ರೌಢಶಾಲೆಯ ಚೇತನ್, ಕಾರ್ಯದರ್ಶಿ ಶ್ರೀಧರಬಾಬು, ಸಹಕಾರ್ಯದರ್ಶಿ ಸರೋಜಮ್ಮ, ತಾಲ್ಲೂಕು ಅಧ್ಯಕ್ಷ ರಮೇಶ್ಗೌಡ, ಕೆ.ಎನ್.ರಾಮಚಂದ್ರ,ರಘುನಾಥರೆಡ್ಡಿ, ರಾಧಾಮಣಿ, ನಾರಾಯಣಸ್ವಾಮಿ, ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ, ವಿವಿಧ ಶಿಕ್ಷಕ ಸಂಘಗಳ ಪದಾಧಿಕಾರಿಗಳಾದ ಶಿವಾನಂದ, ಸುಭಾಷ್ ಶಾಲೆಯ ಕೃಷ್ಣೇಗೌಡ, ಮುರಳಿಮೋಹನ್, ಅಪ್ಪೇಗೌಡ, ಅಶ್ವಥ್ಥನಾರಾಯಣ, ಎಂ.ನಾಗರಾಜ್, ಶ್ರೀನಿವಾಸ್ ಭಾಗವಹಿಸಿದ್ದರು.