ಬೀದರ್: 2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾಲವಾಗಿ ಪಡೆದಿದ್ದ 99 ಲಕ್ಷ ರೂ. ಹಣವನ್ನು ಹಿಂದಿರುಗಿಸಲು ವಿಫಲವಾದ ಆರೋಪದ ಮೇಲೆ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶಾಸಕರ ದೂರದ ಸಂಬಂಧಿ ಎಂದು ಹೇಳಲಾಗುವ ದೂರುದಾರರು, ಶರಣು ಸಲಗರ್ ಅವರು ಚುನಾವಣಾ ಸಂಬಂಧಿತ ವೆಚ್ಚಗಳಿಗಾಗಿ ಆರ್ಥಿಕ ಸಹಾಯವನ್ನು ಕೋರಿದ್ದರು. 2023ರ ಜನವರಿ ಮತ್ತು ಫೆಬ್ರುವರಿ ನಡುವೆ ಬಹು ಕಂತುಗಳಲ್ಲಿ ಹಣವನ್ನು ಪಡೆದಿದ್ದರು ಮತ್ತು ಆರು ತಿಂಗಳೊಳಗೆ ಸಾಲ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು.
ಆದಾಗ್ಯೂ, ದೂರುದಾರರು ಎರಡು ವರ್ಷ ಕಾಯ್ದರೂ ಹಣ ಹಿಂದಿರುಗಿಸಿಲ್ಲ. ಪದೇ ಪದೆ ಹಣ ನೀಡುವಂತೆ ಕೇಳಿದರೂ ಶಾಸಕರು ಹಣ ಹಿಂದಿರುಗಿಸುವ ಯಾವುದೇ ಲಕ್ಷಣಗಳನ್ನು ತೋರಿಸದಿದ್ದಾಗ, 2025ರ ಸೆಪ್ಟೆಂಬರ್ 14 ರಂದು ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿದ್ದಾರೆ. ಅಲ್ಲಿ ಶಾಸಕರು ಹಣ ನೀಡುವುದಾಗಿ ಒಪ್ಪಿಕೊಂಡು, ಖಾಲಿ ಚೆಕ್ ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸೆಪ್ಟೆಂಬರ್ 16 ರಂದು ದೂರುದಾರರ ಕುಟುಂಬ ಸದಸ್ಯರು ಚೆಕ್ ಅನ್ನು ಬ್ಯಾಕಿಂಗೆ ಹಾಕಬಹುದೇ ಎಂದು ಖಚಿತಪಡಿಸಿಕೊಳ್ಳಲು ಶಾಸಕರ ನಿವಾಸಕ್ಕೆ ಭೇಟಿ ನೀಡಿದಾಗ, ಶರಣು ಸಲಗರ್ ಗಲಾಟೆ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.



