ಚಾಮರಾಜನಗರ: ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಏಪ್ರಿಲ್ 2ರಂದು ಮಧ್ಯಾಹ್ನ 3.30 ಗಂಟೆ ಸಮಯದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತದ (ಪ.ಜಾ) ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಮೆ| ಯುನೈಟೆಡ್ ಬ್ರೀವರೀಸ್ ಲಿಮಿಟೆಡ್ನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರೊಂದಿಗೆ ಕಾರ್ಯಾಚರಣೆ ನಡೆಸಿ ಒಟ್ಟಾರೆ 98 ಕೋಟಿ 52 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಿ ಬ್ರೀವರಿ ಘಟಕದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಮಂಗಳವಾರ (ಏ. 2ರಂದು) ಬಂದ ಅನಾಮಧೇಯ ದೂರವಾಣಿ ಕರೆಯ ಮೇರೆಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರ ಇವರು ಮೊಬೈಲ್ ದೂರವಾಣಿ ಮೂಲಕ ನೀಡಿದ ಆದೇಶದನ್ವಯ ಬ್ರೀವರಿ ಘಟಕಕ್ಕೆ ಭೇಟಿ ನೀಡಿ ಘಟಕದ ದಾಖಲಾತಿಗಳಾದ ಲೆಕ್ಕದ ಪುಸ್ತಕದೊಂದಿಗೆ ಭೌತಿಕ ದಾಸ್ತಾನನ್ನು ಪರಿಶೀಲಿಸಿದಾಗ ಲೆಕ್ಕದ ಪುಸ್ತಕದ ದಾಸ್ತಾನಿಗಿಂತ 7 ಸಾವಿರ ವಿವಿಧ ಬ್ರಾಂಡಿನ ರಟ್ಟಿನ ಪೆಟ್ಟಿಗೆಗಳ ಬಿಯರ್ ದಾಸ್ತಾನು ಕೊಠಡಿಯಲ್ಲಿ ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಈ ಕೃತ್ಯವು ಅಬಕಾರಿ ಕಾಯ್ದೆ ಕಲಂ 9, 10, 11, 12, 14 ಖ/ತಿ 32, 34, 38(ಎ),
43 ಮತ್ತು ಕರ್ನಾಟಕ ಬ್ರೀವರಿಯ ಸನ್ನದು ಷರತ್ತುಗಳ ನಿಯಮ 1, 2, 7 ಮತ್ತು 9 ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಬ್ರೀವರಿ 1967 ರ ನಿಯಮ 18 ಮತ್ತು 19 ಬಾಟ್ಲಿಂಗ್ ರೂಲ್ ನಿಯಮ 13 ಕರ್ನಾಟಕ ಅಬಕಾರಿ (ದಾಸ್ತಾನು, ಸಾಗಾಣಿಕೆ, ಆಮದು ಮತ್ತು ರಫ್ತು ಅಮಲು ಪದಾರ್ಥಗಳು) (ಕರ್ನಾಟಕ) ನಿಯಮಗಳು 1967 ರ ನಿಯಮ 7, 89, 3 ಇವುಗಳ ಉಲ್ಲಂಘನೆಯಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರನ್ವಯ ಮದ್ಯದ ಅಕ್ರಮ ದಾಸ್ತಾನು ದಂಡಾರ್ಹ ಹಾಗೂ ಶಿಕ್ಷಾರ್ಹ ಅಪರಾಧವಾಗಿರುರುತ್ತದೆ.
ಜಪ್ತಿಪಡಿಸಿದ ಸ್ಥಳದ ಕೃತ್ಯವು ಚಾಮರಾಜನಗರ ಲೋಕಸಭಾ ಕ್ಷೇತ್ರ (ಪ.ಜಾ)ದ ವ್ಯಾಪ್ತಿಗೆ ಒಳಪಡಲಿದ್ದು, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ದಾಸ್ತಾನು ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.