ಇದು ಗ್ರೀನ್ ಆಸ್ಕರ್ ಪ್ರಶಸ್ತಿ ವಿಜೇತ ಮ್ಯೂಸಿಕಲ್ ವೈಲ್ಡ್ ಲೈಫ್ ಕಿರು ಚಿತ್ರಕನ್ನಡದ ಪ್ರಪ್ರಥಮ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ಕಿರು ಚಿತ್ರ ‘ಕಪ್ಪೆ ರಾಗ’. ಪ್ರಶಾಂತ್ ಎಸ್ ನಾಯಕ್ ಅವರ ಆರುವರ್ಷಗಳ ಶ್ರಮದಿಂದ ಆರು ನಿಮಿಷಗಳ ಈ ಸುಂದರ ದೃಶ್ಯ ಕಾವ್ಯ ನಿರ್ಮಾಣವಾಗಿದೆ. ಈ ಕುರಿತು ಪ್ರಶಾಂತ್ ಎಸ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು.
ವಲ್ಡ್ ವೈಲ್ಡ್ ಫೋಟೊಗ್ರಾಫಿ ನನ್ನ ಹವ್ಯಾಸ ಎಂದು ಮಾತನಾಡಿದ ನಿರ್ದೇಶಕ ಪ್ರಶಾಂತ್ ಎಸ್ ನಾಯಕ್, ಜಗತ್ತಿನ ಎಲ್ಲಾ ಪರಿಸರ ಚಿತ್ರಕಲಾಸಕ್ತರ ಮನಸ್ಸನ್ನು ಗೆದ್ದಿರುವ ಕಪ್ಪೆ ನಮ್ಮ ಪಶ್ಚಿಮ ಘಟ್ಟದ ಕರುನಾಡ ಕಪ್ಪೆ – ಈ ಕಪ್ಪೆಯನ್ನು ಕುಂಬಾರ ಎಂದು ಕರೆಯುತ್ತಾರೆ. “ಕಪ್ಪೆ ರಾಗ”ದ ನಾಯಕ ಹಾಗು ಜಗದ ಮೊದಲ “ಕುಂಬಾರ”ನ ಕಥೆಯಿದು. 2014 ರಲ್ಲಿ ಮೊದಲ ಬಾರಿಗೆ ಕಂಡು ಬಂದ ಕಪ್ಪೆಯಿದು.ಇರಳುಗಪ್ಪೆಯಾಗಿರುವುದರಿಂದ ಇದನ್ನು ಸೆರೆ ಹಿಡಿಯಲು ಕಷ್ಟ.
ತುಂಬಾ ಕಷ್ಟಪಟ್ಟು ಈ ಪ್ರಯತ್ನ ಮಾಡಿದ್ದೇವೆ. ಇದು ಪಶ್ಚಿಮಘಟ್ಟದಲ್ಲಿ ಅದರಲ್ಲೂ ರಾತ್ರಿ ಮಾತ್ರ ಕಾಣುವ ಕಪ್ಪೆಯಿದು. ನಾನು ಇದರ ಅನ್ವೇಷಣೆಗಾಗಿ ಆರು ವರ್ಷಗಳ ಹಿಂದೆ ಕರ್ನಾಟಕದ ಮಲೆನಾಡಿನ ಪಶ್ಚಿಮಘಟ್ಟದ ಬಳಿ ಹೋಗಿ ಈ ಅಪರೂಪದ ಕಪ್ಪೆಯನ್ನು ಕಂಡುಬಂದೆ. ಕುಪ್ಪಳಿಸುವ ಕಪ್ಪೆ ಕಂಡಿದ್ದ ನಾನು, ನಿಂತಿರುವ ಕಪ್ಪೆ ಕಂಡು ಬೆರಗಾದೆ. ಆದರೆ ಆಗ ಚಿತ್ರೀಕರಣ ಮಾಡಲಿಲ್ಲ. ಕೆಲವು ವರ್ಷಗಳ ನಂತರ ಏಳೆಂಟು ಸ್ನೇಹಿತರ ತಂಡ ಅಲ್ಲಿಗೆ ತೆರಳಿದ್ದೆವು.
ರಾತ್ರಿ ಮಾತ್ರ ಬರುವ ಆ ಹೆಣ್ಣು ಕಪ್ಪೆ ಬಹಳ ಸೂಕ್ಷ್ಮ. ಸ್ವಲ್ಪ ಶಬ್ದವಾದರೂ ಹೊರಟು ಹೋಗುತ್ತದೆ. ನಾವು ಇಷ್ಟು ಜನ ಹೋಗಿದ್ದರೂ ಶಬ್ದ ಮಾಡದೆ, ಚಿತ್ರೀಕರಣ ಮಾಡಿಕೊಂಡು ಬಂದಿರುವುದು ಸಾಹಸವೇ ಸರಿ. ಸಂತಾನೋತ್ಪತ್ತಿಗಾಗಿ ಗಂಡು ಕಪ್ಪೆಯನ್ನು ಹುಡುಕಿ ಬರುವ ಈ ಹೆಣ್ಣು ಕಪ್ಪೆ, ಗಂಡು ಕಪ್ಪೆಯೊಂದಿಗೆ ಸೇರಿ ಏಳೆಂಟು ಮೊಟ್ಟೆ ಇಟ್ಟು ಹೊರಟು ಬಿಡುತ್ತದೆ. ಇಲ್ಲೊಂದು ಆಶ್ಚರ್ಯ. ಎಲ್ಲಾ ಪ್ರಾಣಿಗಳ ಮೊಟ್ಟೆಗಳನ್ನು ಸಾಮಾನ್ಯವಾಗಿ ತಾಯಿ ಪ್ರಾಣಿ ಕಾಯುತ್ತದೆ.
ಇಲ್ಲಿ ಮೊಟ್ಟೆಗಳನ್ನು ಕಾಯುವುದು ತಂದೆ ಪ್ರಾಣಿ. ಆ ಮೊಟ್ಟೆಗಳು ಯಾವುದೇ ಪ್ರಾಣಿಗಳ ಕಣ್ಣಿಗೆ ಬೀಳದ ಹಾಗೆ ಅಲ್ಲಿನ ಬಂಡೆ ಕಲ್ಲಿನ ಮೇಲೆ ಅಂಟಿಸಿ, ಮಣ್ಣಿನಿಂದ ಪ್ಲಾಸ್ಟಿಂಗ್ ಮಾಡುತ್ತದೆ. ಒಂದುವಾರದ ಬಳಿಕ ಅವು ಕಪ್ಪೆ ಮರಿಗಳಾಗಿ ಹೊರ ಬರುತ್ತದೆ. ಇಂತಹ ಅಪರೂಪದ ಕಪ್ಪೆಯ ಕುರಿತು ಚಿತ್ರೀಕರಣ ಮಾಡಿಕೊಂಡು ಬಂದ ಮೇಲೆ ಇದಕ್ಕೆ ಕಾವ್ಯ ರೂಪ ಕೊಡಬೇಕೆಂದು ನಿರ್ಧರಿಸಿದ್ದೆವು. ಗೆಳೆಯ ಪ್ರದೀಪ್ ಕೆ ಶಾಸ್ತ್ರಿ ಅದ್ಭುತ ಹಾಡೊಂದನ್ನು ಬರೆದುಕೊಟ್ಟರು.
ರಾಜೇಶ್ ಕೃಷ್ಣನ್ ಹಾಗೂ ಅರುಂಧತಿ, ಅಶ್ವಿನ್ ಪಿ ಕುಮಾರ್ ಸಂಗೀತ ನೀಡಿರುವ ಈ ಹಾಡನ್ನು ಹಾಡಿದ್ದಾರೆ. ನಾನೇ ಪ್ರಧಾನ ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿದ್ದೇನೆ ಎಂದರು.ಇನ್ನೂ ” ಕಪ್ಪೆ ರಾಗ” ಕಿರು ಚಿತ್ರ ವೀಕ್ಷಿಸಿರುವ ಸದ್ಗುರು ಜಗ್ಗಿ ವಾಸುದೇವ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಕಪ್ಪೆ ರಾಗ” ಲೋಕಾರ್ಪಣೆಯಾಗಿತು.