ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಒಂದು ವರ್ಷ ತುಂಬಿದೆ. ಎತ್ತಿನಹೊಳೆ ಇನ್ನೂ ತೆವಳುತ್ತಲೇ ಇದೆ. ದಿನಾಂಕ:3-3-2014ರಂದು ಚಿಕ್ಕಬಳ್ಳಾಪುರದಲ್ಲಿ ಅಂದಿನ, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಡಿಗಲ್ಲು ಭಾಗ್ಯ ಕಂಡ ಈ ಯೋಜನೆ ಇವತ್ತು ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂದು ಜೆಡಿಎಸ್ ಟೀಕಿಸಿದೆ.
ಈ ಸಂಬಂಧ ಟ್ವಿಟ್ ಮಾಡಿರುವ ಜನತಾದಳ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಜಲ ಸಂಪನ್ಮೂಲಕ್ಕಿಂತ ಬೆಂಗಳೂರು ನಗರಾಭಿವೃದ್ಧಿ ಮೇಲೆಯೇ ಆಸಕ್ತಿ ಜಾಸ್ತಿ. ಒಮ್ಮೆಯಷ್ಟೇ ಎತ್ತಿನಹೊಳೆಗೆ ಕಾಟಾಚಾರದ ಭೇಟಿ ನೀಡಿದ್ದ ಅವರು, ಹೂತಿಟ್ಟ ನಿಧಿಯಂತಿರುವ ರಾಜಧಾನಿಯನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ಅತ್ಯುತ್ಸಾಹ ತೋರುತ್ತಿದ್ದಾರೆ ಎಂದು ದೂರಲಾಗಿದೆ.
ಕಳಪೆ ಕಾಮಗಾರಿ, ಅಧಿಕಾರಿ-ಮಂತ್ರಿಗಳ ನಿರ್ಲಕ್ಷ್ಯದಿಂದ ಇಡೀ ಯೋಜನೆ ಹಳ್ಳ ಹಿಡಿಯುವ ಸ್ಥಿತಿಗೆ ಬಂದಿದೆ. ಪೈಪುಗಳು ತುಕ್ಕು ಹಿಡಿಯುತ್ತಿದ್ದರೆ, ತಡೆಗೋಡೆಗಳು ಕುಸಿದು ಬೀಳುತ್ತಿವೆ. 10 ವರ್ಷ ಕಳೆದರೂ ಹನಿ ನೀರೂ ಹರಿಯುವ ನಿರೀಕ್ಷೆ ಇಲ್ಲ. ಗುತ್ತಿಗೆದಾರರ ಜೇಬು ತುಂಬಿದ್ದಷ್ಟೇ ಭಾಗ್ಯ ಎಂದು ಕಿಡಿಕಾರಿದ್ದಾರೆ.