ಬೆಂಗಳೂರಿನ ಅರಿಶಿನಕುಂಟೆಯ ಶ್ರೀ ಗಣೇಶ ನೃತ್ಯಾಲಯ ಸಂಗೀತ ಮತ್ತು ನೃತ್ಯಶಾಲೆಯ ನೃತ್ಯಗುರು ಭಾವನಾ ಗಣೇಶ್ ಮತ್ತು ಎಂ.ಡಿ. ಗಣೇಶ್ ಹಾಗೂ ಶಿಷ್ಯವೃಂದದಿಂದ ಜೂ.1ರಿಂದ 3ರವರೆಗೆ ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ನೃತ್ಯ ಸೇವೆ ನಡೆಸಿಕೊಟ್ಟರು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಜೂನ್ 1ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಜೆ ಈ ನೃತ್ಯ ದಂಪತಿಗಳ ನೃತ್ಯ ಪ್ರದರ್ಶನ ನಡೆಡು, ಬಳಿಕ ಜೂನ್ 2ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹಾಗೂ ಜೂನ್ 3ರಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನ ನೀಡಿದರು.
ಶ್ರೀಕೃಷ್ಣ ಲೀಲಾ ನೃತ್ಯರೂಪಕದಲ್ಲಿ ಭಗವಾನ್ ಶ್ರೀ ಕೃಷ್ಣನ ಅನೇಕ ಲೀಲಾ ವಿನೋದಗಳಾದ ಬಾಲಕನಾಗಿ, ಯುವಕನಾಗಿ ರಾಸಲೀಲೆ ಹೀಗೆ ವೈವಿದ್ಯಮಯ ವಸ್ತು ವಿಷಯದೊಡನೆ ತಂಡದ ವಿದ್ಯಾರ್ಥಿಗಳು ಭಕ್ತಿಪರವಶತೆಯಿಂದ ಅಮೋಘ ನೃತ್ಯ ಪ್ರದರ್ಶನ ನೀಡಿ ಕಿಕ್ಕಿರಿದು ತುಂಬಿದ್ದ ಸಭಿಕ ಭಕ್ತರ ಮನರಂಜಿಸಿದರು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಕಾರ್ಯಕ್ರಮ ವೀಕ್ಷಿಸಿ ಆಧುನಿಕತೆಯ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಕಲಾ ಮಾಧ್ಯಮ ದಲ್ಲಿ ಭಾರತೀಯ ಸಂಸ್ಕೃತಿಯ ದೈವಿ ಚಿಂತನೆಯನ್ನು ಕ್ರಿಯಾತ್ಮಕವಾಗಿ ನೀಡುತ್ತಿರುವುದು ಶ್ಲಾಘನೀಯ ಎಂದರು. ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ , ಶ್ರೀಮಠದ ಸಾಂಸ್ಕೃತಿಕ ಕಾರ್ಯಕ್ರಯಗಳ ಉಸ್ತುವಾರಿಯ ರಮೇಶ್ ಭಟ್, ಸುಗುಣಮಾಲದ ಮಹಿತೋಷ್ ಇತರರು ಉಪಸ್ಥಿತರಿದ್ದರು.