ಭಾರತೀಯ ಇತಿಹಾಸದಲ್ಲಿ ಬ್ರಟಿಷರ ದೌರ್ಜನ್ಯದ ಪಟ್ಟಿಯಲ್ಲಿ ನೆನಪು ಇಡಲೇ ಬೇಕಾದ ದಿನ ಜಲಿಯನ್ವಾಲಾಬಾಗ್ ಹತ್ಯಾಕಾಂಡದ ದಿನ ಅಂದರೆ ಏಪ್ರಿಲ್ 13 ಕ್ರಿ.ಶ. 1919. ಇಂದಿಗೆ 105 ವರ್ಷಗಳ ಹಿಂದೆ ಪಂಜಾಬಿನ ಜಲಿಯನ್ವಾಲಾಬಾಗ್ನಲ್ಲಿ ನಡೆದ ಅಮಾನುಷ ಹತ್ಯಾಕಾಂಡವು ಬ್ರಿಟಿಷರ ದುರ್ನಡತೆ ಮತ್ತು ಅತ್ಯಾಚಾರಗಳಿಗೆ ಬಹು ದೊಡ್ಡ ಸಾಕ್ಷಿ.
ಬೈಸಾಕಿಯ ಜಾತ್ರೆಯ ಸಮಯದಲ್ಲಿ ಬ್ರಿಟಿಷರ ರೌಲತ್ ಆಕ್ಟ್ನ ವಿರೋಧದಲ್ಲಿ ವ್ಯಕ್ತ ಪಡಿಸಲು ಸೇರಿದ್ದ ಸಭೆಯಲ್ಲಿ ಸಾವಿರಾರು ಜನ ಅಮಾಯಕರ ಮಕ್ಕಳ ಮಹಿಳೆಯ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ ಜನರಲ್ ಡಾಯರ್ನ ಕುಕೃತ್ಯದಿಂದ ಸಾವಿರಾರು ಜನರು ಮರಣ ಹೊಂದಿದರು. ಜಲಿಯನ್ ವಾಲಾಬಾಗ್ನ ಪ್ರದೇಶದಲ್ಲಿ ಮೂರು ಕಡೆಗಳಲ್ಲಿ ಕಟ್ಟಡವಿದ್ದು ಒಂದೇ ಬಾಗಿಲು ಇದ್ದು ಆ ಬಾಗಿಲನ್ನು ಮುಚ್ಚಿ ಎಲ್ಲರನ್ನೂ ಹತ್ಯೆಗೈದ ಹಂತಕ ಜನರಲ್ ಡಾಯರ್ನ ಕ್ರೂರತನ ಹಾಗೂ ಬ್ರಿಟಿಷ್ ಆಡಳಿತದ ದುರಾಡಳಿತದ ಸಾಕ್ಷಿಯಾಗಿದೆ.
ಅನೇಕ ಜನರು ಸಾಯುವದರ ಜೊತೆಗೆ ಬಹಳಷ್ಟು ವಿಪರೀತವಾಗಿ ಗಾಯಗೊಂಡು ಜೀವನವನ್ನು ನಡೆಸಲಾಗದ ಪರಿಸ್ಥಿತಿಗೆ ಹೋಗಿದ್ದರು. ಬ್ರಿಟಿಷರಿಗೆ ತಮ್ಮ ಈ ಕೃತ್ಯದ ಬಗೆಗೆ ಪಶ್ಚಾತಾಪ ಆಗಲೇ ಇಲ್ಲ. ನೂರು ವರ್ಷಗಳ ನಂತರ ಖೇದವಿದೆ ಎಂದರು.ಈ ಜನರ ಹತ್ಯೆಗೆ ಕಾರಣ ತಮ್ಮದಲ್ಲದ ಯುದ್ಧಕ್ಕೆ ತಾವು ಏಕೆ ಹಣವನ್ನು ನೀಡಬೇಕೆಂದು ಪ್ರಶ್ನಿಸಿದ್ದು ಆಗಿದೆ. ರೌಲತ್ ಆಕ್ಟ್ ಎಂದರೆ ಕಾನೂನಿನ ಪ್ರಕಾರ ಯಾವುದೇ ಕಾರಣ ಇಲ್ಲದೇ ಜನರನ್ನು ಬಂಧಿಸಿ ಅವರಿಗೆ ಶಿಕ್ಷೆ ವಿಧಿಸಬಹುದು ಎಂಬುದಾಗಿತ್ತು.
ಬೈಸಾಖಿಯ ಆ ಉತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಸೈಫುದ್ದೀನ್ ಕಿಚ್ಲೆವ್ ಮತ್ತು ಡಾ. ಸತ್ಯಪಾಲ್ ಎಂಬುವವರನ್ನು ಇದೇ ರೀತಿಯಲ್ಲಿ ಬಂಧಿಸಿದ್ದರು ಅವರ ಬಂಧನದ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಜಲಿಯನ್ವಾಲಾಬಾಗ್ನಲ್ಲಿ ನಡೆಸಿದಾಗ ನಿಶ್ಶಸ್ತ್ರರಾಗಿದ್ದ ಜನರ ಮೇಲೆ ಗುಂಡಿನದಾಳಿ ನಡೆಸಿದ ಅಮಾನವೀಯ ಘಟನೆ ಅನೇಕ ಜನರಲ್ಲಿ ಸ್ವಾತಂತ್ರದ ಕಿಚ್ಚು ಹಚ್ಚಿದ್ದು, ನಿರಂತರ ಹೋರಾಟದಿಂದ ಸ್ವತಂತ್ರರಾಗಿದ್ದು ಇತಿಹಾಸ.
ನಮಗೆ ಸ್ವಾತಂತ್ರ್ಯ ದೊರಕಬೇಕೆಂಬ ಕಾರಣದಿಂದ ಪ್ರಾಣತೆತ್ತವರ ಬಲಿದಾನವನ್ನು ನಾವು ಸದಾ ಕಾಲ ನೆನಯಬೇಕು. ಸ್ವಾತಂತ್ರದ ಮಹತ್ವ ಅಂದಿನವರಿಗೆ ತಿಳಿದಿತ್ತು ಮುಂದಿನ ಪೀಳಿಗೆಗಾಗಿ ಹೋರಾಡಿದ ಮಹನೀಯರ ತ್ಯಾಗಕ್ಕೆ ಆ ಜನರ ಬಲಿದಾನಕ್ಕೆ ನಮ್ಮ ಕೃತಜ್ಞತೆಯನ್ನು ನಮ್ಮ ದೇಶವನ್ನು ರಕ್ಷಿಸಿಕೊಂಡು, ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದರೆ ಕೃತಜ್ಞತೆಯೊಂದಿಗೆ ಅವರ ಋಣ ತೀರಿಸಿದಂತೆ.ಪ್ರಸ್ತುತ ಪರಿಸ್ಥಿತಿಯಲ್ಲಿ 200 ವರ್ಷಗಳ ಹೋರಾಟದಿಂದ ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಮಾತ್ರವಲ್ಲದೆ ನಮ್ಮ ದೇಶದ ಅಭಿವೃದ್ಧಿಯ ಕಾರ್ಯಗಳಲ್ಲಿ ಪಾಲ್ಗೊಂಡು ದೇಶದ ಉನ್ನತಿಗೆ ಮತ್ತು ಸ್ವಾಯತ್ತತೆಗೆ ಧಕ್ಕೆ ಬರದಂತೆ ಕಾಯ್ದು ಕೊಳ್ಳುವುದು ಪ್ರಜೆಗಳೆಲ್ಲರ ಕರ್ತವ್ಯವಾಗಿದೆ