ಬೆಂಗಳೂರು: ಮಹಿಳೆಯನ್ನು ಕಟ್ಟಿ ಹಾಕಿ ವಿವಸ್ತ್ರಗೊಳಿಸಿದ ಘಟನೆಯ ಸಂಬಂಧ ವಿವರ ಪಡೆಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಚಿಸಿರುವ ಬಿಜೆಪಿ ಸತ್ಯಶೋಧನಾ ಸಮಿತಿ ಇಂದು ಬೆಳಗಾವಿಗೆ ಭೇಟಿ ನೀಡಿದೆ.
ಸಂಸದರಾದ ಅಪರಾಜಿತಾ ಸಾರಂಗಿ, ಸುನಿತಾ ದುಗ್ಗಲ್, ರಂಜಿತಾ ಕೋಲಿ, ಲಾಕೆಟ್ ಚಟರ್ಜಿ ಅಲ್ಲದೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರಾ ಅವರ ನಿಯೋಗವು ಬೆಳಿಗ್ಗೆ ಬೆಳಗಾವಿ ವಿಮಾನನಿಲ್ದಾಣಕ್ಕೆ ಆಗಮಿಸಿತು.
ನಿಯೋಗವು ಸಂತ್ರಸ್ತೆಯನ್ನು ಭೇಟಿ ಮಾಡಿ ಧೈರ್ಯ ಹೇಳುವುದಲ್ಲದೆ, ಘಟನೆಯ ಮಾಹಿತಿ ಪಡೆಯಲಿದೆ. ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಅಂಗಡಿ, ಜಿಲ್ಲಾಧ್ಯಕ್ಷರಾದ ಸಂಜಯ್ ಪಾಟೀಲ್, ಅನಿಲ್ ಬೆನಕೆ, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದು, ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಿದರು.
ಸಂಸದರ ನಿಯೋಗ ಇಂದು ವಂಟಮೂರಿ ಗ್ರಾಮದಲ್ಲಿ ಹಲ್ಲೆಗೊಳಗಾದ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಗೆ ಸಾಂತ್ವನ ಹೇಳಿ ಅಲ್ಲಿಂದ ವಂಟಮೂರಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಗ್ರಾಮದಲ್ಲಿ ಸ್ಥಳೀಯರಿಂದ ಘಟನೆ ಸಂಬಂಧ ಮಾಹಿತಿ ಕಲೆ ಹಾಕಲಿದ್ದು, ತದನಂತರ ಪ್ರಕರಣದ ಬಗ್ಗೆ ದೂರು ದಾಖಲಾಗಿರುವ ಕಾಕತಿ ಪೊಲೀಸ್ ಠಾಣೆಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಬಿಜೆಪಿ ಮಹಿಳಾ ಸಂಸದರ ಭೇಟಿಯ ಬೆನ್ನಲ್ಲೆ ರಾಷ್ಟ್ರೀಯ ಪರಿಷ್ಠಿಷ್ಟ ಪಂಗಡದ ಆಯೋಗದ ನಿಯೋಗವು ಸಹ ಇಂದು ಬೆಳಗಾವಿಗೆ ಭೇಟಿ ನೀಡಿ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.