ಮಾಸ್ಕೋ: ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆದಿದೆ. ಐವರು ಭಯೋತ್ಪಾದಕರು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಭಾರೀ ಸಾವುನೋವು ಸಂಭವಿಸಿದ್ದು, ಗುಂಡಿನ ದಾಳಿಯಲ್ಲಿ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ 150ಕ್ಕೂ ಹೆಚ್ಚುಜನರು ಗಾಯಗೊಂಡಿದ್ದಾರೆ. ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣದ ಒಳಗಡೆಯಿದ್ದ ಮಹಿಳೆಯರು ಮತ್ತು ಮಕ್ಕಳು ಎನ್ನದೆ ಕಂಡಕಂಡವರ ಮೇಲೆ ಉಗ್ರರು ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದು ಬಾಂಬುಗಳನ್ನು ಎಸೆದಿದ್ದಾರೆ.
ರಷ್ಯಾ ರಾಜಧಾನಿ ಮಾಸ್ಕೋದ ಕನ್ಸರ್ಟ್ ಹಾಲ್ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಮಾರ್ಚ್ 7ರಂದು ಅಮೆರಿಕವು ಭಯೋತ್ಪಾದಕ ದಾಳಿ ಬಗ್ಗೆ ರಷ್ಯಾಗೆ ಎಚ್ಚರಿಸಿತ್ತು. ಅಮೆರಿಕ ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ವ್ಯಾಟ್ಸನ್ ಅವರು ರಷ್ಯಾದಲ್ಲಿ ಉಗ್ರರ ದಾಳಿ ಎಚ್ಚರಿಕೆ ನೀಡಿದ್ದರು.
ಗುಂಡಿನ ದಾಳಿ ಬಳಿಕ ಕಟ್ಟಡವು ಸ್ಫೋಟದಿಂದ ಹೊತ್ತಿ ಉರಿಯುತ್ತಿದೆ. ಹೊತ್ತಿ ಉರಿಯುತ್ತಿರುವ ಕಟ್ಟಡದಲ್ಲಿ ನೂರಾರು ಜನ ಸಿಲುಕಿರುವ ಅಂದಾಜಿದೆ. ಐವರು ಭಯೋತ್ಪಾದಕರ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕಂಡು ಕೇಳರಿಯದ ಭಾರೀ ಭಯೋತ್ಪಾದನೆ ಇದಾಗಿದ್ದು, ಹತ್ತಾರು ಬಾಂಬುಗಳು ಸ್ಪೋಟಗೊಂಡಿವೆ. ರಷ್ಯಾ ಇದನ್ನು ಭಯೋತ್ಪಾದಕ ಕೃತ್ಯ ಎಂದು ಸಾರಿದೆ.