ದೊಡ್ಡಬಳ್ಳಾಪುರ: ಹೂವಿನ ಬೆಳೆಗೆ ಅಳವಡಿಸಿದ್ದ ಡ್ರಿಪ್ ಪೈಪ್ ಹಾಗೂ ಸೇವಂತಿ ಹೂವಿನ ಸಸಿಗಳನ್ನು ನಾಶಪಡಿಸಿರುವ ಘಟನೆ ತಾಲೂಕಿನ ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.
ಗ್ರಾಮದ ರೈತ ಗಂಗಪ್ಪ ಅವರು ತಮ್ಮ ಜಮೀನಿನಲ್ಲಿ ತಿಂಗಳ ಹಿಂದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಸೇವಂತಿ ಹಾಗೂ ಬಟನ್ಸ್ ಹೂವಿನ ಸಸಿಗಳನ್ನು ನಾಟಿ ಮಾಡಿದ್ದರು.ಗ್ರಾಮದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಗಂಗಪ್ಪ ಅವರ ತೋಟವಿದೆ. ಈ ಭಾಗದಲ್ಲಿ ಚಿರತೆ ಕಾಟಕ್ಕೆ ಹೆದರಿ ರಾತ್ರಿ ಮನೆಯಿಂದ ತಡವಾಗಿ ತೋಟದ ಬಳಿ ಬಂದಿದ್ದಾರೆ. ಬೆಳಿಗ್ಗೆ ಎದ್ದು ನೋಡಿದಾಗ ಕಿಡಿಗೇಡಿಗಳು ಬೇಕಂತಲೇ ಹೂವಿನ ಬೆಳೆಗೆ ಹಾಕಿದ್ದ ಡ್ರಿಪ್ ಪೈಪ್ ಗಳನ್ನು ಅಲ್ಲಲ್ಲಿ ಹೊಡೆದು ಹಾಕಿದ್ದು, ಸೇವಂತಿ ಮತ್ತು ಬಟನ್ಸ್ ಸಸಿಗಳನ್ನು ನಾಶಪಡಿಸಿದ್ದಾರೆ.
ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ದುಷ್ಕರ್ಮಿಗಳು ಹೂವಿನ ಬೆಳೆ ಹಾಗೂ ಡ್ರಿಪ್ ಪೈಪ್ ಗಳನ್ನು ಹೊಡೆದು ಹಾಕಿದ್ದಾರೆ. ಬೆಳಿಗ್ಗೆ ಕಿಡಿಗೇಡಿಗಳ ಕೃತ್ಯ ಬೆಳಕಿಗೆ ಬಂದಿದೆ. ಒಂದು ಸಸಿಗೆ ಮೂರು ರೂಪಾಯಿ ಕೊಟ್ಟು ತಂದಿದ್ದೆ. ಈಗ ಕಿಡಿಗೇಡಿಗಳ ಕೃತ್ಯಕ್ಕೆ ಎಲ್ಲವೂ ನಾಶವಾಗಿದೆ. ಈಗ ಹೊಸದಾಗಿ ಡ್ರಿಪ್ ಪೈಪ್ ಅಳವಡಿಸಲು ಆಗುವುದಿಲ್ಲ, ಬೇಸಿಗೆ ಕಾಲದಲ್ಲಿ ಸಸಿಗಳಿಗೆ ನೀರು ಹಾಯಿಸದಿದ್ದರೆ ಬೆಳೆ ನಾಶ ಆಗುತ್ತದೆ. ಇದರಿಂದ ನನಗೆ ಸಾಕಷ್ಟು ನಷ್ಟವಾಗುವ ಸಂಭವವಿದೆ ಎಂದು ರೈತ ಗಂಗಪ್ಪ ಅಳಲು ತೋಡಿಕೊಂಡರು.
ಇವರ ತೋಟದಲ್ಲೇ ಇತ್ತೀಚೆಗೆ ಪಂಪ್, ಮೋಟಾರ್ ಹಾಗೂ ಕೇಬಲ್ ಕಳವಾಗಿತ್ತು. ಇದೀಗ ಡ್ರಿಪ್ ಪೈಪ್, ಸೇವಂತಿ ಸಸಿ ನಾಶ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ಕಿಡಿಗೇಡಿಗಳ ಈ ಕೃತ್ಯದಿಂದಾಗಿ ತೋಟದಲ್ಲಿ ಉಳಿದುಕೊಳ್ಳಲು ಭೀತಿ ಎದುರಾಗಿದೆ. ನಮಗೆ ನ್ಯಾಯ ಮತ್ತು ರಕ್ಷಣೆ ಬೇಕಾಗಿದೆ ಎಂದು ಅಲವತ್ತುಕೊಂಡರು.