ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತುಂಬಾ ವಿರಳ. ಪ್ರೇಮಾ ಕಾರಂತ್, ಕವಿತಾ ಲಂಕೇಶ್, ಸುಮನಾ ಕಿತ್ತೂರು, ರೂಪಾ ಅಯ್ಯರ್, ರಿಶಿಕಾ ಶರ್ಮ ಇಂಥವರ ಸಾಲಿಗೆ ಈಗ ಮೇಘಾ ಅಕ್ಷರಾ ಹೊಸ ನಿರ್ದೇಶಕಿ ಸೇರ್ಪಡೆಯಾಗಿದ್ದಾರೆ. ಅವರೀಗ ಕಂಪ್ಯೂಟರ್ ಸ್ಕ್ರೀನ್ ಬೇಸ್ ಹಾರರ್ ಕಥಾಹಂದರ ಹೊಂದಿರುವ ರಾಕ್ಷಸತಂತ್ರ ಎಂಬ ಚಲನಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಜೊತೆಗೆ ಚಿತ್ರದ ನಿರ್ಮಾಣ ಕೂಡ ಮಾಡಿದ್ದಾರೆ. ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಐದು ಜನ ಸ್ನೇಹಿತರು ವಿಡಿಯೋ ಕಾನ್ಫರೆನ್ಸ್ ಕಾಲ್ ಮಾಡಿಕೊಂಡಿರುವಾಗ ಅಚಾನಕ್ಕಾಗಿ ಒಂದು ವಿಚಿತ್ರವನ್ನು ನೋಡುತ್ತಾರೆ. ಅದರಿಂದ ಮುಂದೆ ಏನೇನಾಗುತ್ತ ಹೋಗುತ್ತದೆ ಎಂಬುದನ್ನು ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಘಟನಾವಳಿಗಳೊಂದಿಗೆ ನಿರ್ದೇಶಕಿ ಮೇಘಾ ಅಕ್ಷರಾ ಅವರು ಚಿತ್ರವನ್ನು ನಿರೂಪಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತೇನಿಲ್ಲ, ಐದು ಪಾತ್ರಗಳೂ ಅಷ್ಟೇ ಪ್ರಮುಖವಾಗಿವೆ. ಎಲ್ಲಾ ಪಾತ್ರಗಳೂ ಇಡೀ ಸಿನಿಮಾ ಕಾಣಿಸುತ್ತವೆ. ರಾತ್ರಿ ಆರಂಭವಾಗಿ ಬೆಳಗಿನ ಜಾವದ ವೇಳೆಗೆ ಮುಗಿಯುವ ಕಥೆಯಿದು.ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ರಕ್ಷಿತಾ ನಾಗರಾಜು, ಸುಖೇಶ್ ಆನಂದ್, ರಕ್ಷಿತಾ ಮಲ್ಲಿಕ್, ತಿಲಕ್ ಕುಮಾರ್ ಹಾಗೂ ಮೇಘಾ ಅಕ್ಷರಾ ಕೂಡ ನಟಿಸಿದ್ದಾರೆ. ದಿನೇಶ್ ಬಾಬು ಅವರ ಛಾಯಾಗ್ರಹಣ, ಯಶವಂತ್ ಅವರ ಸಂಗೀತ, ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿದೆ.