ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೊರ್ವ ಗಾಯಗೊಂಡಿರುವ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮುನಿರಾಜು(68) ಮೃತದುರ್ದೈವಿ, ಮುರುಳಿ ಎಂಬಾತನ ಸ್ಥಿತಿ ಗಂಭೀರವಾಗಿದೆ. ಪ್ರಮೋದ್, ರವಿಕುಮಾರ್, ಪಲ್ಲವಿ ಎಂಬುವರು ಕೃತ್ಯ ಎಸಗಿದ ಆರೋಪಿಗಳು.
ಆರೋಪಿ ಪ್ರಮೋದ್ ಮುನಿರಾಜು ಮನೆ ಬಳಿ ನಾಯಿ ಕರೆದುಕೊಂಡು ಬರುತ್ತಿದ್ದರು. ಇದಕ್ಕೆ ಮುನಿರಾಜು ಆಕ್ಷೇಪ ವ್ಯಕ್ತಪಡಿಸಿದ್ದು, ನಾಯಿ ಕರೆತಂದು ಗಲೀಜು ಮಾಡಿಸ್ತಿಯಾ ಎಂದು ಪ್ರಶ್ನಿಸಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆಗ ಪೊಲೀಸರು ಇಬ್ಬರ ಬಳಿಯೂ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದರು.
ಮರುದಿನ ಪ್ರಮೋದ್ ಮತ್ತು ರವಿಕುಮಾರ್ ಮತ್ತೆ ಮುನಿರಾಜ್ ಜೊತೆ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದರು. ಗಲಾಟೆ ವೇಳೆ ಪ್ರಮೋದ್, ರವಿಕುಮಾರ್ ದೊಣ್ಣೆಯಿಂದ ಮುನಿರಾಜ್ ಮತ್ತು ಅವರ ಜೊತೆ ಇದ್ದ ಮುರುಳಿ ಎಂಬುವರಿಗೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಮುನಿರಾಜು ಸಾವನ್ನಪ್ಪಿದ್ದು, ಮುರಳಿಗೆ ಗಂಭೀರ ಗಾಯಗಳಾಗಿವೆ. ಇನ್ನು ಕೊಲೆಗೆ ಪ್ರಮೋದ್ ಪತ್ನಿ ಪಲ್ಲವಿ ಸಹ ಸಾಥ್ ನೀಡಿರುವ ಆರೋಪ ಕೇಳಿಬಂದಿದೆ.
ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Review