ಬೆಂಗಳೂರು: ಅಮೆರಿಕನ್ ಪಿಟ್ ಬುಲ್ ಜಾತಿಗೆ ಸೇರಿದ ಸಾಕು ನಾಯಿಯೊಂದು ನಾಲ್ಕು ವರ್ಷದ ಬಾಲಕಿ ಮೇಲೆ ದಾಳಿ ಮಾಡಿದ ಘಟನೆ ನಗರದಲ್ಲಿ ನಡೆದಿದ್ದು ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.
ಕಳೆದ ಜನವರಿ 13ರಂದು ಸಂಜಯ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಗಂಭೀರವಾಗಿ ಗಾಯಗೊಂಡರೂ ಅಪಾಯದಿಂದ ಪಾರಾಗಿದ್ದಾಳೆ.ವ್ಯಕ್ತಿಯೊಬ್ಬರು ಆಕ್ರಮಣಕಾರಿ ಪ್ರವೃತ್ತಿ ಹೊಂದಿರುವ ಪಿಟ್ ಬುಲ್ ತಳಿಯ ನಾಯಿಯನ್ನು ಸಾಕಿದ್ದರು. ಆ ಮನೆಗೆ ನೇಪಾಳ ಮೂಲದ ಸುನಿಲ್ ಎಂಬಾತ ಕೆಲಸಕ್ಕೆ ಹೋಗುತ್ತಿದ್ದ. ಅದೊಂದು ದಿನ ಆತ ತನ್ನ ನಾಲ್ಕು ವರ್ಷದ ಮಗಳು ಸಾನಿಯಾಳನ್ನು ಕೂಡಾ ಜತೆಗೆ ಕರೆದುಕೊಂಡು ಹೋಗಿದ್ದ.
ಹಾಗೆ ಮನೆಗೆ ಹೋಗಿದ್ದ ವೇಳೆ ಡೇಂಜರಸ್ ಪಿಟ್ಬುಲ್ ಆ ಪುಟ್ಟ ಬಾಲಕಿಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಸುಮ್ಮನೆ ಇದ್ದ ಮಗುವಿನ ಮೇಲೆ ಎರಗಿದ ಆಕೆಯ ದೇಹದಲ್ಲಿ ಹಲವು ಕಡೆ ಈ ನಾಯಿ ಗಾಯ ಮಾಡಿದೆ.ಸುನಿಲ್ ಮತ್ತು ಮನೆಯವರು ಸೇರಿ ಕೂಡಲೇ ಸಾನಿಯಾಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರಾದರೂ ಈ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ. ವಿಚಾರ ತಿಳಿದ ಪೊಲೀಸರು ಬಾಲಕಿ ತಂದೆ ಸುನೀಲ್ ಬಳಿ ಮಾಹಿತಿ ಕಲೆಹಾಕಿದ್ದಾರೆ, ಆದರೂ ದೂರು ನೀಡಲು ಬಾಲಕಿ ತಂದೆ ನಿರಾಕರಿಸಿದ್ದಾರೆ.
ಮಾಲೀಕರೇ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಒಂದು ವೇಳೆ ನಾನು ದೂರು ನೀಡಿದರೆ ಅವರು ಚಿಕಿತ್ಸೆ ಕೊಡಿಸುವುದಿಲ್ಲ. ನನಗೆ ಚಿಕಿತ್ಸೆ ಕೊಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲ. ಹೀಗಾಗಿ ದೂರು ನೀಡುವುದಿಲ್ಲ. ನನಗೆ ನನ್ನ ಮಗಳು ಬದುಕಿ ಬಂದರೆ ಸಾಕು ಎಂದು ತಂದೆ ಹೇಳಿದ್ದಾರೆ ಎನ್ನಲಾಗಿದೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.