ಕೆಂಗೇರಿ: ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿ ರುವ ವಹ್ನಿಕುಲ ಕ್ಷತ್ರಿಯ ಆರಾಧ್ಯ ದೈವ ದ್ರೌಪದಿಯ ಅಮ್ಮನವರ ಕರಗ ಶಕ್ತಿ ಅರಾಧನೆ ಮಾಡುವುದು ವಾಡಿಕೆಯಾಗಿದೆ. ಅದರಂತೆ ಅನಾದಿಕಾಲದಿಂದಲೂ ಪ್ರತೀತಿಯಾಗಿ ಆಚರಿಸಿಕೊಂಡು ಬರಲಾಗುತ್ತಿರುವ ವೈಭವದ ಭವ್ಯ ಕರಗ ಶಕ್ತಿ ಉತ್ಸವದ ಅಂಗವಾಗಿ ಕೆಂಗೇರಿ ವಹ್ನಿಕುಲ ಕ್ಷತ್ರಿಯ ಸಮುದಾಯದವರು ಆಚರಿಸಲ್ಪಡುವ ಕರಗ ಆಚರಣೆಯ ಆರಂಭದಲ್ಲಿ ಹಸಿ ಕರಗವನ್ನು ಮುನ್ನಡೆಸುವ ಮೂಲಕ ಚಾಲನೆ ನೀಡಲಾಗುತ್ತದೆ.
ಈ ಸಂದರ್ಭದಲ್ಲಿ ಆದಿಶಕ್ತಿ ಶ್ರೀ ದ್ರೌಪದಿಯನ್ನು ವಹ್ನಿಕುಲ ಕ್ಷತ್ರಿಯ (ತಿಗಳ ಕ್ಷತ್ರಿಯ) ಜನಾಂಗದವರ ಕುಲದೇವತರಯಾಗಿ ಅರಾಧಿಸುತ್ತಾರೆ ಹಸಿ ಕರಗದಂದು ನಡುರಾತ್ರಿಯ ಹೊತ್ತಿಗೆ ಪೂಜಾರಿ, ಕುಲಪುರೋಹಿತರು, ವೀರಕುಮಾರರು ಮತ್ತು ಕುಲಸ್ಥರು ಸೇರುವರು. ಅಲ್ಲಿ ಒಂದೆಡೆ ಸ್ಥಳ ಶುದ್ಧಿಮಾಡಿ ಕೆಂಪು ಬಣ್ಣದ ಛತ್ರಿಯನ್ನು ನೆಡುವರು. ಹಿಂದಿನ ಏಳು ದಿನಗಳಿಂದ ವ್ರತ ನಿರತರಾಗಿದ್ದ ವೀರಕುಮಾರರು ಹೊಳೆಯುವ ಹರಿತವಾದ ಶಕ್ತಿಗಳನ್ನು ಅರ್ಧ ಚಂದ್ರಾಕಾರವಾಗಿ ಜೋಡಿಸುವರು.
ಇವರು ಕರಗ ದೇವತೆಯ ಹೆಸರಿನಲ್ಲಿ ತಮ್ಮ ಕುಲ ಪುರೋಹಿತರು ಮತ್ತು ಹಿರಿಯರ ಸಮ್ಮುಖದಲ್ಲಿ ದೀಕ್ಷೆ ಕೈಗೊಂಡವರು, ದೇವಿಯ ಆರಾಧನೆಯಲ್ಲಿ ಅಚಲವಾದ ಶ್ರದ್ಧೆ ಭಕ್ತಿಯನ್ನು ಇಟ್ಟಿರುವ ಇವರು ಕರಗಕ್ಕೆ ಅಂಗ ರಕ್ಷಕರು. ಭಕ್ತಿ ದ್ಯೋತಕವಾಗಿ ಕೈಯಲ್ಲಿರುವ ಅಲರುಗಳಿಂದ ಎದೆಯ ಮೇಲೆ ಇವರು ಪ್ರಹಾರ ಮಾಡಿಕೊಳ್ಳುತ್ತಾರೆ.
ಆಗ ರಕ್ತ ಬಂದರೆ ಔಷಧೀಯ ಬದಲಾಗಿ ದೇವಿಯ ಬಂಡಾರವನ್ನು ಗಾಯದ ಮೇಲೆ ಹಾಕಿಕೊಳ್ಳುತ್ತಾರೆ. ಆನಂತರ ಕುಲಪುರೋಹಿತರ ನಿರ್ದೇಶನ ಮತ್ತು ಕುಲವೃದ್ಧರ ನೇತೃತ್ವದಲ್ಲಿ ರಾತ್ರಿ ಸುಮಾರು ಮೂರುಗಂಟೆಯ ಹೊತ್ತಿಗೆ ಹಸೀಕರಗ ಸಿದ್ಧವಾಗಿರುತ್ತದೆ. ಕೆಂಪು ಛತ್ರಿಯ ಕೆಳಗೆ, ಅರ್ಧ ಚಂದ್ರಾಕಾರವಾಗಿ ಜೋಡಿಸಿದ ಕತ್ತಿಗಳ ಮಧ್ಯೆ ಜಲ ತುಂಬಿದ ಕರಗವನ್ನು ಕೆಂಪು ವಸ್ತ್ರ, ದುಂಡು ಮಲ್ಲಿಗೆಹಾರ, ಅರಿಶಿಣ- ಕುಂಕುಮ ಮುಂತಾದ ಮಂಗಳ ದ್ರವ್ಯಗಳಿಂದ ಅಲಂಕರಿಸಿ ಪೂಜೆಗೆ ಅಣಿ ಮಾಡಲಾಗುತ್ತದೆ.
ಈ ವೇಳೆಗಾಗಲೇ ಕರಗದ ಪೂಜಾರಿಯನ್ನು ಮಲ್ಲಿಗೆ ಹೂವಿನಿಂದ ಸಿಂಗರಿಸಿರುತ್ತಾರೆ. ಪೂಜಾರಿ ಮಹಾ ಮಂಗಳಾರತಿ ಮಾಡುತ್ತಾನೆ. ದೇವಿಯ ಸೇವೆಗಾಗಿ ನಿಂತಿರುವ ವೀರಕುಮಾರರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ಆವೇಶ ತುಂಬಿಕೊಂಡು ಎದೆಯ ಮೇಲೆ ಪ್ರಹಾರ ಮಾಡಿಕೊಳ್ಳುತ್ತಾರೆ.
ಸುತ್ತುವರೆದ ವೀರಕುಮಾರರ ನಡುವೆ ಪೂಜಾರಿ ಭಕ್ತಿಯಿಂದ ಕರಗವನ್ನು ಎತ್ತಿಕೊಂಡು, ತನ್ನ ಸೊಂಟದ ಎಡಭಾಗದಲ್ಲಿ ಗಡಿಗೆ ಇಟ್ಟುಕೊಳ್ಳುವಂತೆ ಇಟ್ಟುಕೊಳ್ಳುತ್ತಾನೆ. ಪೂಜಾರಿ ನರ್ತನ ಮಾಡುತ್ತಾ ಮುಂದುವರೆಯುತ್ತಾನೆ.
ಘಂಟೆ ಪೂಜಾರಿ ಮಾರ್ಗದರ್ಶನ ಮಾಡುತ್ತಿರುತ್ತಾನೆ. ಈ ಮಹೋತ್ಸವದಲ್ಲಿ ಘಂಟೆ ಪೂಜಾರಿಯ ಪಾತ್ರ ಮುಖ್ಯವಾದದ್ದು. ಕರಗ ಹೊರಟಾಗ ಈತ ತಾಳಬದ್ಧವಾಗಿ ಘಂಟೆಯ ನಾದ ಮಾಡುತ್ತಾ, ದೇವಿಯ ಮಹಿಮೆಯನ್ನು ಹೊಗಳುತ್ತಾ ಕರಗಕ್ಕೆ ಮಾರ್ಗದರ್ಶನ ಮಾಡುತ್ತಾ ಮುಂದುವರೆಯುತ್ತಾನೆ. ಈ ಹಕ್ಕು ಪೂಜಾರಿಯ ಹಕ್ಕಿನಂತೆ ವಂಶಪಾರಂಪರ್ಯವಾಗಿ ಬಂದಿದೆ. ಮಧ್ಯೆ ಕೆಲವೆಡೆ ಪೂಜಾರಿ ಮಂಡಿಯೂರಿ ಕುಳಿತಾಗ ಅಲಗು ಸೇವೆ ನಡೆಯುತ್ತದೆ. ಹೀಗೆ ಮುಂದುವರೆದ ಹಸೀಕರಗ ಕೆಂಗೇರಿ ಹಸಿ ಕರಗದ ಮಂಟಪದಿಂದ ಯಲ್ಲಮ್ಮ ದೇವಸ್ಥಾನದ ಬಳಿ ಬರುತ್ತದೆ ನಂತರ ಒಳ ಪ್ರವೇಶಿಸಿಸ ನಂತರ ಹಸಿ ಕರಗ ಮುಕ್ತಾಯವಾಗುತ್ತದೆ ಎಂದು ದೇವಸ್ಥಾನದ ಮುಖ್ಯಸ್ಥರಾದ ಪಿ ಮುನಿರಾಜು ರವರು ತಿಳಿಸಿದರು.
ಈ ಕೆಂಪೇಗೌಡ ಪ್ರಧಿಕಾರದ ಅಯುಕ್ತ ವಿನಯ್ ಜೆಡಿಎಸ್ ಮುಖಂಡ ಚೇತನ್ ಗೌಡ ವಹ್ನಿಕುಲ ಕ್ಷತ್ರಿಯ ಮುಖಂಡರಾದ ಜೆ ರಮೇಶ್ ಶಾಂತರಾಜು ಕೆ ವೈ ಕೃಷ್ಣ ಪುರುಷೋತ್ತಮ ಕಿಟ್ಟಿ ಗಂಟೆಪೂಜಾರಿಗಳಾದ ಶ್ರೀನಿವಾಸ್ ಸಂಜೀವ ಜಯಂತ್ ಸೀತಾರಾಮ್ ಮೊದಲಿನ ಕರಗ ಪೂಜಾರಿ ಪಿ ಮೂರ್ತಿ ಹೇಮಂತ್ ಕುಮಾರ್ ಮುನಿಅಂಜಿನಪ್ಪ ಸೇರಿದಂತೆ ಸಮುದಾಯದ ಮುಖಂಡರು ಭಾಗವಹಿಸಿದ್ದರು.