ತಿ.ನರಸೀಪುರ: ಅನ್ನದಾತ ರೈತನ ಮೇಲೆ ಸರ್ಕಾರಿ ಅಧಿಕಾರಿಯೊಬ್ಬ ತನ್ನ ಶೂನಿಂದ ಹಲ್ಲೆ ನಡೆಸಲು ಮುಂದಾಗಿರುವುದನ್ನು ಖಂಡಿಸಿ ತಾಲ್ಲೂಕು ರೈತ ಸಂಘವು ಪ್ರತಿಭಟನೆ ನಡೆಸಿತು.ಪಟ್ಟಣದ ಮಿನಿವಿಧಾನ ಸೌಧದ ಮುಂದೆ ನಡೆದ ಧರಣಿಯಲ್ಲಿ ನೂರಾರು ರೈತ ಸಂಘದ ಮುಖಂಡರು ಮತ್ತು ರೈತರು ಸರ್ಕಾರಿ ಅಧಿಕಾರಿಯ ದುರ್ನಡತೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.ರೈತನ ಮೇಲೆ ಹಲ್ಲೆ ನಡೆಸಿದ ಅಧಿಕಾರಿಯ ವಿರುದ್ಧ ತುರ್ತು ಕ್ರಮಕೈಗೊಳ್ಳದ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ. ಕೆ. ಕುಮಾರಸ್ವಾಮಿ,ಅಧಿಕಾರಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗದ ಅನ್ನದಾತ ಆಗಿರುವ ರೈತನ ಮೇಲೆ ಹುಣಸೂರು ತಾಲೂಕು ಕೊತ್ತೆಗಾಲದಲ್ಲಿ ಸರ್ಕಾರಿ ಅಧಿಕಾರಿಯಿಂದ ಹಲ್ಲೆ ನಡೆದಿರುವುದು ಖಂಡನೀಯ.
ತಂಬಾಕು ಬೆಳೆಯ ಪರವಾನಗಿ ನವೀಕರಣಕ್ಕಾಗಿ ಕಚೇರಿಗೆ ಬಂದಿದ್ದ ಕೃಷ್ಣಕುಮಾರ್ ಎಂಬ ರೈತನ ಮೇಲೆ ತಂಬಾಕು ಮಂಡಳಿಯ ಅಧೀಕ್ಷಕ ಬ್ರಿಜ್ ಭೂಷಣ್ ತನ್ನ ಶೂನಿಂದ ಹಲ್ಲೆ ನಡೆಸಲು ಮುಂದಾಗಿರುವುದು ಅತ್ಯಂತ ಖಂಡನೀಯ.ಅಲ್ಲದೆ ಅವಾಚ್ಯ ಪದಗಳಿಂದ ರೈತನನ್ನು ನಿಂದಿಸಿರುವುದು ಅಪರಾಧ.ಇದು ರಾಜ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳ ದರ್ಪ ಮತ್ತು ಗೂಂಡಾವರ್ತನೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಅಧಿಕಾರಿಗಳ ಮೇಲೆ ರೈತರು ಅಥವ ಸಾರ್ವಜನಿಕರು ಹಲ್ಲೆ ನಡೆಸಿದಲ್ಲಿ ಕರ್ತವ್ಯ ಅಡ್ಡಿ ಮತ್ತು ಹಲ್ಲೆ ಸೇರಿದಂತೆ ವಿವಿಧ ಕಾನೂನುಗಳ ಮೂಲಕ ಅವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ.ಆದರೆ,ಅಧಿಕಾರಿಯೊಬ್ಬ ರೈತನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಶೂನಿಂದ ಹಲ್ಲೆ ನಡೆಸಲು ಮುಂದಾಗಿರುವುದು ಇಡೀ ದೇಶದ ರೈತ ವರ್ಗಕ್ಕೆ ಮಾಡಿದ ಅಪಮಾನವಾಗಿದೆ.
ಹಾಗಾಗಿ ರೈತನ ಮೇಲೆ ಹಲ್ಲೆ ನಡೆಸಿರುವ ಅಧಿಕಾರಿಯನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಬೇಕು.ಸರ್ಕಾರ ಅಧಿಕಾರಿಯ ನಡೆಯನ್ನು ಸಮರ್ಥನೆ ಮಾಡಿಕೊಳ್ಳುವುದನ್ನು ಬಿಟ್ಟು ಆತನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು.ಇಲ್ಲವಾದಲ್ಲಿ ರಾಜ್ಯದಾದ್ಯಂತ ರೈತ ಸಂಘಟನೆಗಳ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ರೈತಸಂಘದ ಟೌನ್ ಅಧ್ಯಕ್ಷ ಈ.ರಾಜು,ಗೌರವಾಧ್ಯಕ್ಷ ಮುಡುಕುನಪುರ ಮಹದೇವಸ್ವಾಮಿ,ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ಶಿವನಂಜು, ಉಪಾಧ್ಯಕ್ಷ ತಲಕಾಡು ದಿನೇಶ್ , ಜಿಲ್ಲಾ ಉಪಾಧ್ಯಕ್ಷ ಬೂದಳ್ಳಿ ಶಂಕರ್, ಹಲವಾರು ಮಹದೇವಸ್ವಾಮಿ, ತಲಕಾಡು ಚೆಲುವರಾಜು, ಕೊತ್ತೆಗಾಲ ಶಾಂತಮೂರ್ತಿ, ಸುಜ್ಜಲೂರು ಚಂದ್ರಶೇಖರ್, ಮಾಡ್ರಳ್ಳಿ ರಾಜೇಂದ್ರ, ಮಾಡ್ರಳ್ಳಿ ನಂಜುಂಡಸ್ವಾಮಿ, ಬೆನಕನಹಳ್ಳಿ ಶಿವಶಂಕರಮೂರ್ತಿ, ಬೆನಕನಹಳ್ಳಿ ಶಿವರುದ್ರಪ್ಪ, ಹನುಮನಾಳು ಜಗದೀಶ, ಮಾಡ್ರಳ್ಳಿ ಕೆಂಚಪ್ಪ ಹಾಗೂ ಇನ್ನೂ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.