ಬೆಂಗಳೂರು: ಇಲ್ಲಿಯ ಕನಕಪುರ ರಸ್ತೆಯಲ್ಲಿರುವ ಶ್ರೀರವಿಶಂಕರ ಗುರೂಜಿ ನೇತೃತ್ವದ ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ನೈಸರ್ಗಿಕ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಡಿಸೆಂಬರ್ 9, 10 ಹಾಗೂ 11 ರಂದು 3 ದಿನಗಳ ವಿಶ್ವ ಸಿರಿಧಾನ್ಯಗಳ ಸಾವಯವ ಮತ್ತು ನೈಸರ್ಗಿಕ ಕೃಷಿ ಮೇಳ ಹಾಗೂ ಕೃಷಿ ವಸ್ತು ಪ್ರದರ್ಶನವು ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಆವರಣದಲ್ಲಿ ಜರುಗಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾಕ್ಟರ್ ಎಸ್. ವಿ. ಸುರೇಶ್ ಅವರು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದಕ್ಷಿಣ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಆರೋಗ್ಯಕರ ಜೀವನವನ್ನು ವೃದ್ಧಿಸಲು ಮೀಸಲಾಗಿರುವ ಈ ಜಾಗತಿಕ ಕೃಷಿ ಮೇಳ ಒಂದು ಅಭೂತಪೂರ್ವ ಸಾವಯವ ಮತ್ತು ನೈಸರ್ಗಿಕ ಕೃಷಿ ವಿಕಾಸ ಚಿಂತನೆಯ ಸಮಾವೇಶವಾಗಿ ಮೂಡಿಬರಲಿದೆ ಎಂದರು.
ವಿಚಾರ ಮಂಥನ: ಮೂರು ದಿನಗಳ ಅವಧಿಯಲ್ಲಿ ನೈಜ ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಗುಣಾತ್ಮಕ ಬದಲಾವಣೆ ಮತ್ತು ತಂತ್ರಜ್ಞಾನ ಬಳಕೆ ಕುರಿತು ವಿಸ್ತೃತ ವಿಚಾರ ಮಂಥನ ನಡೆಯಲಿದೆ. ಈ ವಿಚಾರ ಮಂಥನದಲ್ಲಿ ಪಾಲ್ಗೊಳ್ಳುವ ಹಲವಾರು ಸಾವಯವ ಕೃಷಿ ತಜ್ಞರು ರೈತರ ಸಮಸ್ಯೆ-ಸವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಿ ವಿಶೇಷವಾಗಿ ಸಿರಿಧಾನ್ಯಗಳ, ಸಾವಯವ ಮತ್ತು ನೈಸರ್ಗಿಕ ಕೃಷಿ ಸಂವರ್ಧನೆಗೆ ಪೂರಕ ಸಲಹೆಗಳನ್ನು ನೀಡಲಿದ್ದಾರೆ ಎಂದರು.
ಬೃಹತ್ ಪ್ರದರ್ಶನ: ಸುಮಾರು 180 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯುವ ಮೂಲಕ ಸಿರಿಧಾನ್ಯಗಳ, ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವಲ್ಲಿ ಅಗತ್ಯವಾದ ಕೃಷಿ ವಸ್ತುಗಳು, ಬೀಜಗಳು, ಮಾರುಕಟ್ಟೆ ವ್ಯವಸ್ಥೆ, ಅಧಿಕ ಇಳುವರಿ ಸಾಧಿಸಲು ಇರುವ ಬೇಸಾಯ ಕ್ರಮಗಳು ಸೇರಿದಂತೆ ವಿಭಿನ್ನ ವಿಚಾರಗಳನ್ನು ವಿವರಿಸುವ ಬೃಹತ್ ಕೃಷಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದ್ದು, ಇದು ಜಾಗತಿಕ ಮಟ್ಟದಲ್ಲಿ ವ್ಯಾಪಕ ಮಹತ್ವ ಪಡೆದುಕೊಂಡಿದೆ.
ವಿದೇಶಗಳಿಂದಲೂ ಕೃಷಿ ತಜ್ಞರು, ಆಸಕ್ತ ರೈತರು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ.ಮೇಳದಲ್ಲಿ ಮುಖ್ಯವಾಗಿ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಆಹಾರ ಸಂಸ್ಕರಣೆಯ ಸಂಸ್ಥೆಗಳು, ರಫ್ತುದಾರರು, ಸರಕಾರಿ ಸಂಸ್ಥೆಗಳೂ ಸೇರಿದಂತೆ ವಿವಿಧ ಸಿರಿಧಾನ್ಯ, ಸಾವಯವ ಮತ್ತು ನೈಸರ್ಗಿಕ ಕೃಷಿಯ ಸಂಘಟನೆಗಳು ಆಸಕ್ತಿಯಿಂದ ಪಾಲ್ಗೊಳ್ಳಲಿವೆ.
ಈ ವಿಶ್ವ ಸಿರಿಧಾನ್ಯಗಳ ಸಾವಯವ ನೈಸರ್ಗಿಕ ಕೃಷಿ ಮೇಳವು ಖರೀದಿದಾರರು ಹಾಗೂ ಮಾರಾಟಗಾರರ ಸಂಪರ್ಕ ಸೇತುವೆಯಾಗಿಯೂ ಕಾರ್ಯ ಮಾಡಲಿದೆ. ಪ್ರತೀ ದಿನ ಸುಮಾರು 15 ಸಾವಿರಕ್ಕೂ ಅಧಿಕ ಜನರು ಮೇಳದಲ್ಲಿ ಭಾಗವಹಿಸುತ್ತಿದ್ದು, ಒಟ್ಟು 3 ದಿನಗಳ ಅವಧಿಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನತೆ ಈ ಮೇಳದ ಪ್ರಯೋಜನ ಪಡೆಯಲಿದ್ದಾರೆ ಎಂದವರು ತಿಳಿಸಿದರು.
ಕನಕಪುರ ರಸ್ತೆಯಲ್ಲಿರುವ ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಆವರಣಕ್ಕೆ ತಲುಪಲು ಸಾರಿಗೆ ಬಸ್ ಹಾಗೂ ಮೆಟ್ರೋ ರೈಲು ಸಂಪರ್ಕವಿದ್ದು, ಭಾಗವಹಿಸುವ ಸಾರ್ವಜನಿಕರ ವಾಹನ ನಿಲುಗಡೆಗೆ ಅಲ್ಲಿ ವಿಶಾಲವಾದ ಪಾರ್ಕಿಂಗ್ ವ್ವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದೂ ಅವರು ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ನೈಸರ್ಗಿಕನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಂಗನಾಥ ಪ್ರಸಾದ್, ಶ್ರೀ ರವೀಂದ್ರ ದೇಸಾಯಿ, ಉದಯಕುಮಾರ ಕೊಳ್ಳಿಮಠ, ಬೆಂಗಳೂರು ಕೃಷಿ ವಿ.ವಿ.ಯ ಕುಲಪತಿ ಡಾ.ಎಸ್.ವಿ.ಸುರೇಶ್ ಹಾಗೂ ಸಾವಯವ ಕೃಷಿ ವಿಭಾಗದ ಡಾ. ಬೋರಯ್ಯ ಮತ್ತು ಇತರರು ಇದ್ದರು.