ಹಳೇಬೀಡು: ಕನಕದಾಸ ಜಯಂತಿ ಪ್ರಯುಕ್ತ ಹಳೇಬೀಡಿನಲ್ಲಿ ಬುಧವಾರ ವೈಭವದ ಮೆರವಣಿಗೆ ನಡೆಯಿತು.ಕನಕದಾಸರ ಚಿತ್ರವನ್ನು ಹೂವಿನಿಂದ ಅಲಂಕರಿಸಿದ್ದ ಮಂಟಪದಲ್ಲಿ ಆರೋಹಣ ಮಾಡಲಾಯಿತು. ನಂತರ ಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು. ಅತಿಥಿಗಣ್ಯರು ಪೂಜೆ ನೆರವೇರಿಸಿಲ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಕಲಾತಂಡಗಳೊಂದಿಗೆ ಹೊಯ್ಸಳ ವೃತ್ತದಿಂದ ಹೊರಟ ಮೆರವಣಿಗೆ ದೇವಾಲಯ ರಸ್ತೆ, ಬೇಲೂರು ರಸ್ತೆಯಲ್ಲಿ ರಾಜನಶಿರಿಯೂರು ವೃತ್ತದವರೆಗೆ ಚಲಿಸಿ, ಪುನಃ ಹೊಯ್ಸಳ ವೃತ್ತಕ್ಕೆ ಬಂದು ಸಮಾಪ್ತಿಗೊಂಡಿತು. ಅರಕಲಗೂಡುಮಾರುತಿ ವೀರಗಾಸೆ ಕಲಾ ತಂಡ ವೀರಗಾಸೆ ಪ್ರಸ್ತುತ ಪಡಿಸಿತು.
ತಗ್ಗಿನಹಳ್ಳಿ ಅಜ್ಜಂಪುರದ ಡೊಳ್ಳು ಕುಣಿತ ಜನರ ಮನಸೂರೆಗೊಂಡಿತು.ಮಲ್ಲಾಪುರದ ಬಸವ ಹಾಗೂ ಆಕರ್ಷಕ ಕೊಂಬಿನ ದಷ್ಟಪುಷ್ಟ ಟಗರು ಮೆರವಣಿಗೆಗೆ ಆಕರ್ಷಣಿ ನೀಡಿತು. ಮೆರವಣಿಗೆಗೂ ಮೊದಲು ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಹೇಮಾವತಿ ಮಂಜುನಾಥ್ ಮಾತನಾಡಿ, ಕುರುಬ ಸಮಾಜ ಒಗ್ಗಟ್ಟಿನಿಂದ ಸಾಗಬೇಕು.
ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿಸಬೇಕು. ಸಮಾಜದ ಪ್ರಗತಿಗಾಗಿ ಒಬ್ಬರಿಗೊಬ್ಬರು ಸಹಕಾರದಿಂದ ಜೀವಿಸಬೇಕು ಎಂದರು. ಜಿಲ್ಲಾ ಕುರುಬ ಸಮಾಜ ಪ್ರಧಾನ ಕಾರ್ಯದರ್ಶಿ ರಂಗನಾಥ, ನಿರ್ದೇಶಕ ಸಂತೋಷ್, ತಾಲ್ಲೂಕು ಕಾರ್ಯದರ್ಶಿ ವೀರಣ್ಣ.ಕೆ.ಎಂ ಮೊದಲಾದ ಗಣ್ಯರು ಭಾಗವಹಿಸಿದ್ದರು. ಕನಕ ನೌಕರ ಬಳಗ, ಕನಕ ಯುವಕರ ಬಳಗ, ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಹಾಗೂ ಸ್ಥಳೀಯ ಕುರಬ ಸಮಾಜ ಆಶ್ರಯದಲ್ಲಿ ಕನಕ ಜಯಂತಿ ನಡೆಯಿತು.