ಯಲಹಂಕ: ಸಮಾಜ ಕಲ್ಯಾಣ ಇಲಾಖೆ ಕರ್ನಾ ಟಕ ಸರ್ಕಾರ ಕೈಗೊಂಡಿರುವ ಸಂವಿಧಾನದ ಮಹತ್ವ ಸಾರುವ ಸಂವಿಧಾನ ಜಾಗೃತಿ ಜಾತಾ ರಥವು ಭಾನುವಾರ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಚೋಹಳ್ಳಿ ಗ್ರಾಮ ಪಂಚಾಯಿತಿ ಪ್ರವೇಶಿಸಿದ್ದು ಗ್ರಾ. ಪಂ. ಅಧ್ಯಕ್ಷೆ ಸರಸ್ವತಿ ಮಾಯಣ್ಣ ನೇತೃತ್ವದಲ್ಲಿ ಪಂಚಾಯಿತಿ ಆಡಳಿತ ಸಿಬ್ಬಂದಿ ಪುಷ್ಪಾರ್ಚನೆ ಮಾಡಿ ವಾದ್ಯಗೋಷ್ಠಿಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು.
ಮಾಚೋಹಳ್ಳಿ ಗ್ರಾಮದ ಮುಂಭಾಗದಲ್ಲಿ ವೇದಿಕೆ ಸಿದ್ದಪಡಿಸಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಯ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಸಂವಿಧಾನದ ಆಶಯ ಮತ್ತು ಬದ್ಧತೆಗಳನ್ನು ಜನರಿಗೆ ತಿಳಿಸಿದರು.
ಬಳಿಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಂವಿಧಾನದ ಪೀಠಿಕೆಯನ್ನು ಬೋಧಿಸಿ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಸಂವಿಧಾನದ ಮಹತ್ವವನ್ನು ವಿವರಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಮಾಯಣ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹರೀಶ್, ಮಾಜಿ ಅಧ್ಯಕ್ಷರಾದ ಎಂ ಬಿ ರಾಮಕೃಷ್ಣಯ್ಯ, ನರಸಿಂಹಮೂರ್ತಿ ಹನುಮಂತಯ್ಯ,ಪ್ರಕಾಶ್, ಶಶಿ, ಲೀಲಾವತಿ ಮೈಲಾರಯ್ಯ, ಸೌಮ್ಯಶ್ರೀ, ಪವಿತ್ರ ವೆಂಕಟರಮಯ್ಯ ಜಾನಕಮ್ಮ, ಸೇರಿದಂತೆ ಹಲವು ಮುಖಂಡರು ಗ್ರಾಮಸ್ಥರು ಭಾಗವಹಿಸಿದ್ದರು.