ಗೌರಿಬಿದನೂರು: ರಾಮ ಜನ್ಮಭೂಮಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಗೆ ನಗರದಲ್ಲಿ ಅಪಾರ ಸಂಖ್ಯೆಯ ಹಿಂದೂಗಳು ಭವ್ಯ ಸ್ವಾಗತ ಕೋರಿದರು.ನಗರದ ಸುಮಂಗಲಿ ಕಲ್ಯಾಣ ಮಂಟಪದ ಬಳಿಯ ಗಣಪತಿ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಶೋಭಾಯಾತ್ರೆ ಮೂಲಕ ಶನಿಮಹಾತ್ಮ ಸ್ವಾಮಿ ದೇವಾಲಯಕ್ಕೆ ಮಂತ್ರಾಕ್ಷತೆಯನ್ನು ಕರೆತರಲಾಯಿತು.
ನಗರ ಸೇರಿದಂತೆ ಗ್ರಾಮಾಂತರ ಪ್ರದೇಶ ದಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿ ಸಿದ್ದರು. ಮಂತ್ರಾಕ್ಷತೆ ಆಗಮಿಸಿದ ಹಿನ್ನಲೆಯಲ್ಲಿ ದೇವಾಲಯದಲ್ಲಿ ರಾಮತಾರಕ ಹೋಮ ಆಯೋಜಿಸಲಾಗಿತ್ತು. ಹಿರಿಯ ಅರ್ಚಕರಾದ ಬಾಲಾಜಿ ಶರ್ಮ ನೇತೃತ್ವದಲ್ಲಿ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.
ತಾರಕ ರಾಮ ಹೋಮದ ಪೂರ್ಣಾಹುತಿ ಬಳಿಕ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ನಗರದ ವಾರ್ಡ್ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರಾಮಭಕ್ತ ಹಾಗೂ ಕಾರ್ಯಕರ್ತರಿಗೆ ಮಂತ್ರಾಕ್ಷತೆ ವಿತರಿಸಲಾಯಿತು. ಅಕ್ಷತಾ ಅಭಿಯಾನದ ತಾಲೂಕು ಸಂಚಾಲಕ ಸಾಗಾನಹಳ್ಳಿ ಶಿವಕುಮಾರ್ ಮಾತನಾಡಿ, ಮರ್ಯಾದ ಪುರುಷೋತ್ತಮ ಶ್ರೀರಾಮ ಕೋ ಟ್ಯಾಂತರ ಹಿಂದೂಗಳ ಮನೆ ಮನಗಳಲ್ಲಿ ನೆಲೆಸಿದ್ದಾನೆ.
ಹಿಂದುಗಳ ಆಶಯದಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಲಲ್ಲಾನ ರಾಮಮಂದಿರದಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಪ್ರತಿ ಹಿಂದೂಗಳ ಮನೆಗೆ ತಲುಪಿಸುವ ಸಂಕಲ್ಪವನ್ನು ರಾಮಭಕ್ತರು ಮಾಡಬೇಕು ಎಂದರು. ಎಬಿವಿಪಿ ಚಂದ್ರು ಮಾತನಾಡಿ, ಅಸಂಖ್ಯ ಹಿಂದೂಗಳ ಕನಸು ನನಸಾಗುವ ಸಮಯ ಹತ್ತಿರವಾಗಿದೆ. ರಾಮಕೋಟೆ ಬರೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.
ಅದೇ ರೀತಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆಯುತ್ತಿರುವ ಈ ಶುಭ ಸಂದರ್ಭದಲ್ಲಿ ಎಲ್ಲೆಡೆ ರಾಮಜಪ ಮೊಳಗುವಂತೆ ಹಿಂದೂಗಳು ವ್ಯವಸ್ಥೆ ಮಾಡಬೇಕು. ರಾಮನ ಸಂದೇಶಗಳನ್ನು ಸಾರುವ ಕೆಲಸ ಮಾಡಬೇಕು ಎಂದರು.ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಶ್ರೀ ತಿರುಮಲ ಟ್ರಸ್ಟ್ ಸಮಿತಿಯವರು ವಿಎಚ್ಪಿ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಮನೆ ಮನೆಗೂ ಅಕ್ಷತೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡರು. ಮುಖಂಡರಾದ ಎನ್. ಎಂ. ರವಿ ನಾರಾಯಣ ರೆಡ್ಡಿ, ಡಾ. ಎಚ್. ಎಸ್. ಶಶಿಧರ್, ವೇಣು, ಪ್ರಸಾದ್, ನರೇಶ್, ಸ್ವಾಗತ್, ಶಿವಾರೆಡ್ಡಿ, ರವಿ, ಮಾರ್ಕೆಟ್ ಮೋಹನ್ ಅಪಾರ ಸಂಖ್ಯೆಯ ಮುಖಂಡರು ತಾಲ್ಲೂಕಿನ ಅತ್ಯಂತ ಆಗಮಿಸಿದ್ದರು.