ಗದಗ: ಮಲಗಿದ್ದಲ್ಲೇ ಬೆಟಗೇರಿ ನಗರ ಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿದೆ.
ನಗರಸಭೆ ಉಪಾಧ್ಯಕ್ಷೆ ಸುನಂದ ಬಾಕಳೆ ಅವರ ಪುತ್ರ ಕಾರ್ತಿಕ್ ಬಾಕಳೆ(27), ಪರುಷರಾಮ(55) ಪತ್ನಿ ಲಕ್ಷ್ಮಿ(45) ಪುತ್ರಿ ಆಕಾಂಕ್ಷ(16) ಎಂಬುವರೇ ಕೊಲೆಯಾದವರು. ಕೊಲೆಗಾರರು ಕೊಲೆ ಮಾಡಿದ ನಂತರ ಪರಾರಿಯಾಗಿದ್ದು, ಮೃತ ನಾಲ್ವರ ಪೈಕಿ ಮೂವರು ದಾಸರಓಣಿಯ ತಮ್ಮ ಮನೆಯ ಮಹಡಿ ಮೇಲೆ ಮಲಗಿದ್ದರು ಎನ್ನಲಾಗಿದ್ದು, ಈ ಮೂವರು ಮೂಲತಃ ಕೊಪ್ಪಳಜಿಲ್ಲೆಯವರು.
ಏಪ್ರಿಲ್17ರಂದು ಪ್ರಕಾಶ್ ಬಾಕಳೆ ಪುತ್ರ ಕಾರ್ತಿಕ್ನ ಮದುವೆಯಾಗಿತ್ತು. ವಿವಾಹ ಕಾರ್ಯಕ್ರಮಕ್ಕೆ ಸಂಬಂಧಿಕರು ಆಗಮಿಸಿದ್ದರು ಎಂದು ತಿಳಿದುಬಂದಿದೆ. ಕೊಲೆ ಮಾಡಿದ ದುಷ್ಕರ್ಮಿಗಳು ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಚರಂಡಿಯಲ್ಲಿ ಎಸೆದುಹೋಗಿರುವುದು ಪೊಲೀಸರ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.