ಬೇಲೂರು: ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿಯಿಂದಾಗಿ ಒಂದಲ್ಲಾ ಒಂದು ಪ್ರಕರಣ ದಾಖಲಾಗುತ್ತಿದೆ. ಅದರಿಂದ ತಾಲೂಕಿನ ಶಿರಗೂರು ಗ್ರಾಮದ ಅಕ್ಷತಾ ಎಂಬುವರಿಗೆ ಸೇರಿದ ಕಾಫಿ ತೋಟಕ್ಕೆ ಸುಮಾರು 10 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ಮಾಡುವ ಮೂಲಕ ಸುಮಾರು 1 ಎಕರೆ ಕಾಫಿ ಕುಯ್ಲಿಗೆ ಬಂದ ಬೆಳೆಯನ್ನು ತುಳಿದು ಸಂಪೂರ್ಣ ನಾಶಮಾಡಿದೆ.
ಕೆಲ ತಿಂಗಳ ಹಿಂದೆಯೂ ಸಹ ಇವರ ತೊಟದಲ್ಲಿ ಸಂಪೂರ್ಣ ಬಾಳೆ ತೋಟ ನಾಶಮಾಡಿದ್ದು ಮತ್ತೆ ದಾಳಿ ಮಾಡುವ ಮೂಲಕ ಸಂಪೂರ್ಣ ನಾಶಮಾಡಿದೆ ಎಂದು ತೋಟದ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಬೆಳೆಗಾರ ಅಕ್ಷತಾ ಬರಗಾಲದಿಂದ ತತ್ತರಿಸಿ ಹೋಗುತ್ತಿದ್ದು ಇನ್ನೊಂದು ಕಡೆ ಕಾಡಾನೆಗಳ ಹಾವಳಿಯಿಂದ ರೋಸಿಹೋಗಿದ್ದೇವೆ.
ಕಷ್ಟಪಟ್ಟು ಬೆಳೆ ಮಾಡಿದ್ದೆವೆ ಬೆಳೆಯನ್ನು ಕುಯ್ಯುವ ಮುಂಚೆಯೇ ಸುಮಾರು 1 ಎಕರೆ ಕಾಪಿತೋಟ ನಾಶ ಮಾಡಿರುವುದು ನಿಜಕ್ಕೂ ಬೇಸರವಾಗಿದೆ.ಇನ್ನು ಅರಣ್ಯ ಇಲಾಖೆಯವರು ಬಂದು ನೋಡಿಕೊಂಡು ಹೊಗುತ್ತಿದ್ದು ಇದು ಎರಡನೇ ಬಾರಿ ಇಂತಹ ಸ್ಥಿತಿ ನಿರ್ಮಾಣ ವಾಗುತ್ತಿದೆ.
ಕೇವಲ ಆನೆಗಳನ್ನು ಹಿಡಿದು ಕಣ್ಣು ಒರೆಸುವ ಬದಲು ನಮಗೆ ಶಾಶ್ವತ ಪರಿಹಾರ ಕೊಡಿ ಇಲ್ಲದಿದ್ದರೆ ನಮ್ಮ ಗ್ರಾಮದಲ್ಲಿರುವವನ್ನು ಇಲ್ಲಿಂದ ಸ್ಥಳಾಂತರ ಮಾಡಿ ಎಂದು ಕಣ್ಣೀರು ಹಾಕಿದರು. ನಮಗೆ ಆನೆಗಳ ದಾಳಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ.ಆದಷ್ಟು ಬೇಗ ಆನೆಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಸುಮಾರು 20 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಚಿಕ್ಕಬಿಕ್ಕೋಡು ಗ್ರಾಮದಲ್ಲಿ ಓಡಾಡುವಂತ ದೃಶ್ಯ ಕಂಡುಬಂದಿತು.