ಮಾಗಡಿ: ಫೆಬ್ರವರಿ 17 ರ ಶನಿವಾರದಂದು ಬೆಳಗ್ಗೆ 11 ಗಂಟೆಗೆ ಕುದೂರಿನ ಶ್ರೀ ರಾಮಲೀಲಾ ಮೈದಾನದಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರ ಅದ್ಯಕ್ಷತೆಯಲ್ಲಿ ಗೃಹ ಲಕ್ಷ್ಮಿಯರ ಬೃಹತ್ ಸಮಾವೇಶ ನಡೆಯಲಿದೆ ಎಂದು ರಾಮನಗರ ಜಿಲ್ಲಾ ಪಂಚಾಯತಿ ಮಾಜಿ ಅದ್ಯಕ್ಷರಾದ ಹೆಚ್.ಎನ್.ಅಶೋಕ್(ತಮ್ಮಾಜಿ)ಹೇಳಿದರು.
ಕುದೂರಿನ ವಿಎಸ್ಎಸ್ಎನ್ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಗಡಿ ತಾಲ್ಲೂಕಿನಲ್ಲಿ 93% ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದು ಅವರಿಗೆ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ಮತ್ತು ಅರಿವು ಮೂಡಿಸಲು ಹಾಗೂ ಅಂಕಿ ಅಂಶಗಳ ಮಾಹಿತಿ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಕಾಳಾರಿ,ಕುದೂರು,ತಿಪ್ಪಸಂದ್ರ ಜಿಪಂ ವ್ಯಾಪ್ತಿಯ ಸುಮಾರು 18 ಸಾವಿರಕ್ಕೂ ಅಧಿಕ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಅಶೋಕ್ ತಿಳಿಸಿದರು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಶಾಸಕ ಹೆಚ್.ಸಿ.ಬಾಲಕೃಷ್ಣ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಮಂತ್ರಿ ರಾಮಲಿಂಗಾರೆಡ್ಡಿ,ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಕೆಪಿಸಿಸಿ ವಕ್ತಾರರಾದ ಕುಸುಮಾ ಹನುಮಂತರಾಯಪ್ಪ, ಸಾಮಾಜಿಕ ಹೋರಾಟಗಾರ್ತಿ ಅಕೈ ಪದ್ಮಶಾಲಿ, ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ, ಸುದೀರ್ ಕುಮಾರ್ ಮುರೊಳ್ಳಿ, ಹೆಚ್.ಎಂ.ಕೃಷ್ಣಮೂರ್ತಿ, ಎಂ.ಎಲ್.ಸಿ.ಎಸ್.ರವಿ,ಸಿ.ಎಂ.ಲಿಂಗಪ್ಪ ಹಾಗೂ ತಾಲ್ಲೂಕಿನ ಹಾಲಿ ಮಾಜಿ ಜನಪ್ರತಿನಿಧಿಗಳು,ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ತಾಲ್ಲೂಕಿನಲ್ಲಿ ಮೂರು ಕಡೆ ಈ ಸಮಾವೇಶ ನಡೆಯಲಿದ್ದು ಮೊದಲ ಸಮಾವೇಶ ನಾಳೆ ಕುದೂರಿನಲ್ಲಿ ನಡೆಯಲಿದ್ದು ಮಾಡಬಾಳ್ ಕಸಬಾ ಮಾಗಡಿ ಪಟ್ಟಣ ಬಿಡದಿ ಕೂಟಗಲ್ ವ್ಯಾಪ್ತಿಯ ಕಾರ್ಯಕ್ರಮವು ದಿನಾಂಕ ನಿಗದಿಯಾದ ನಂತರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಗ್ಯಾರಂಟಿಗಳ ಬಗ್ಗೆ ತಿಳಿಸಿದಾಗ ರಾಜ್ಯದ ಜನರನ್ನು ನಂಬಿಸಿ ಮೋಸ ಮಾಡುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಾರೆ.ಇವೆಲ್ಲಾ ಚುನಾವಣೆಯ ಗಿಮಿಕ್ ಎಂದು ವಿರೋಧ ಪಕ್ಷದವರು ಇನ್ನಿಲ್ಲದಂತೆ ಟೀಕೆ ಟಿಪ್ಪಣಿ ಮಾಡಿದ್ದರು.
ಅವರ ಟೀಕೆಗಳಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ತಕ್ಕುದಾದ ಉತ್ತರ ಕೊಟ್ಟಿದ್ದೇವೆ.ಕರ್ನಾಟಕದ ಜನತೆಗೆ ಕಾಂಗ್ರೆಸ್ ಪಕ್ಷ ಏನೆಂಬುದು ಇದರಲ್ಲಿಯೇ ಅರ್ಥವಾಗಿದೆ.ಯಾವ ಭರವಸೆ ನೀಡೆದ್ದೆವು ಅದನ್ನು ಸಾಕಾರಗೊಳಿಸಿದ್ದೇವೆ ಎಂದು ಜನರಿಗೆ ತಿಳಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಮಣಿಗನಹಳ್ಳಿ ಸುರೇಶ್ಮಾತನಾಡಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಎನ್.ಅಶೋಕ್ ಅವರ ಶ್ರಮದ ಪ್ರತಿಫಲವಾಗಿ ಸಹಕಾರಿ ಸಂಘಗಳ ಮೂಲಕ ಈಗಾಗಲೇ 175 ಕೋಟಿರೂಪಾಯಿಗಿಂತ ಹೆಚ್ಚಿನ ಶೂನ್ಯ ಬಡ್ಡಿ ಸಾಲವನ್ನು ತಾಲ್ಲೂಕಿನ ರೈತರಿಗೆ ನೀಡಿದ್ದು,ಗೃಹ ಲಕ್ಷ್ಮಿಯರ ಸಮಾವೇಶದ ವೇದಿಕೆಯಲ್ಲಿ ತಾಲ್ಲೂಕಿನ 1500 ಕ್ಕೂ ಅಧಿಕ ರೈತರಿಗೆ 22,5 ಕೋಟಿ ರೂಪಾಯಿ ಸಾಲದ ಚೆಕ್ಕನ್ನು ಸಂಸದ ಡಿ.ಕೆ.ಸುರೇಶ್ ನೀಡಲಿದ್ದಾರೆ ಎಂದು ಸುರೇಶ್ ತಿಳಿಸಿದರು.
ಯೂತ್ ಕಾಂಗ್ರೆಸ್ ಅದ್ಯಕ್ಷ ವಿನಯಗೌಡ ಮಾತನಾಡಿ ಕಾಂಗ್ರೆಸ್ ಪಕ್ಷದ ಪ್ರಮುಖ ಭರವಸೆಯೋಜನೆಯಲ್ಲೊಂದಾಗ ಗೃಹಲಕ್ಷ್ಮಿ ಯೋಜನೆಯು ಮಹಿಳಾ ಸಬಲೀಕರಣಕ್ಕೆ ಪ್ರಮುಖ ಕಾರಣವಾಗಿದೆ. ಈ ಯೋಜನೆಯಿಂದ ಮಹಿಳೆಯರು ಜೀವನ ನಡೆಸಲು ಸಹಕಾರಿಯಾಗಿದೆ.ಇದು ನಮ್ಮ ಪಕ್ಷದ ಅಜೆಂಡಾವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಚಿಗಳೂರು ಗಂಗಾಧರ್, ತಾಪಂ ಮಾಜಿ ಸದಸ್ಯೆ ದಿವ್ಯಾರಾಣಿ ಚಂದ್ರಶೇಖರ್, ಕುತ್ತನಗೆರೆ ರಾಜಣ್ಣ, ನೇರಳೇಕೆರೆ ಹನುಮಂತರಾಯಪ್ಪ, ದೊಡ್ಡಸೋಮನಹಳ್ಳಿ ಪಾಪಣ್ಣಗೌಡ, ಮಲ್ಲಿಕುಂಟೆ ರಾಜು, ಸುರೇಶ್ ಸೇರಿದಂತೆ ಮತ್ತಿತರಿದ್ದರು.