This is the title of the web page
This is the title of the web page

`ಸಮಸ್ಯೆಗಳ ಪರಿಹಾರಕ್ಕೆ ಪ್ರಣಾಳಿಕೆ’

ರಾಜ್ಯ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ಭರವಸೆ, ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಣಾಳಿಕೆಯನ್ನು ತಯಾರು ಮಾಡಿದ್ದೇವೆ ಎಂದು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬದ್ಧತೆ, ಧ್ಯೇಯೋದ್ದೇಶಗಳ ಚೌಕಟ್ಟಿನಲ್ಲಿ ಜನರ ಸಮಸ್ಯೆ ಅರ್ಥ ಮಾಡಿಕೊಳ್ಳಲು ರಾಜ್ಯ ಪ್ರವಾಸ ಮಾಡಿ ಎಲ್ಲಾ ಜನಸಮುದಾಯ ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ. ಇದರ ಆಧಾರದ ಮೇಲೆ ಪ್ರಣಾಳಿಕೆ ತಯಾರು ಮಾಡಿದ್ದೇವೆ.

ನಮ್ಮ ಸಮಾಜದಲ್ಲಿದ್ದ ಕೆಳಸ್ಥರದ ಸಮುದಾಯದ ಸಂಘ ಸಂಸ್ಥೆಗಳನ್ನು, ವಿಶೇಷವಾಗಿ ಪೌರಕಾರ್ಮಿಕ, ಕೃಷಿ ಕಾರ್ಮಿಕರು, ಚಾಲಕ ವರ್ಗ, ವಕೀಲರು, ವೈದ್ಯರು, ಪ್ರಗತಿ ಪರ ಹೋರಾಟಗಾರರು, ಸರ್ಕಾರಿ ನೌಕರರು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಅಸಂಘಟಿತ ಕಾರ್ಮಿಕರು, ಧಾರ್ಮಿಕ ಸಂಘಟನೆ, ಅಲ್ಪಸಂಖ್ಯಾತರು, ಲೇಖಕರು, ಸಿಐಐ ಪ್ರತಿನಿಧಿಗಳ ಜತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಬೆಂಗಳೂರಿನಲ್ಲಿನ ಸಮಸ್ಯೆ ಗುರುತಿಸಲು ಅನೇಕ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಸಲಹೆ ಪಡೆದಿದ್ದೇವೆ.

ಇದೆಲ್ಲರದ ಜತೆಗೆ ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್‍ಗಡಗಳಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಯೋಜನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕೆಪಿಸಿಸ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ ನಾವು ಈ ಪ್ರಣಾಳಿಕೆಯನ್ನು ತಯಾರು ಮಾಡಿದ್ದೇವೆ. ರಾಜ್ಯದ ಜ್ವಲಂತ ಸಮಸ್ಯೆ ಅರಿತು, ನಮ್ಮ ಸರ್ಕಾರ ಕೊಟ್ಟ ಅನೇಕ ಯೋಜನೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಿ, ಅಭಿವೃದ್ಧಿ, ಶಾಂತಿ ಸ್ಥಾಪಿಸಲು ಈ ಪ್ರಣಾಳಿಕೆ ತಯಾರು ಮಾಡಿದ್ದೇವೆ ಎಂದರು.