ಬೆಂಗಳೂರು: ವಿಚ್ಛೇದನ ಪಡೆದು ಒಬ್ಬಂಟಿಯಾಗಿದ್ದ ಮಹಿಳೆಗೆ ಹೊಸ ಜೀವನದ ಬಗ್ಗೆ ಪುಸಲಾಯಿಸಿ, ಲಕ್ಷಾಂತರ ರೂಪಾಯಿ ಹಣ ಕದ್ದು, ಒಂದು ಮಗು ಮಡಿಲಿಗೆ ಹಾಕಿ ನೀನ್ಯಾರು ಅಂತಲೇ ಗೊತ್ತಿಲ್ಲ ಎಂದು ಆರೋಪಿಯೊಬ್ಬ ಪರಾರಿಯಾಗಿರುವ ಘಟನೆ ಬನಶಂಕರಿಯಲ್ಲಿ ಬೆಳಕಿಗೆ ಬಂದಿದೆ.
ಬನಶಂಕರಿಯ ಮೋಹನ್ ರಾಜ್ ಎಂಬಾತನೇ ವಿಚ್ಛೇದಿತ ಮಹಿಳೆಗೆ ಮೋಸ ಮಾಡಿದವನು ಎಂದು ಪತ್ತೆ ಹಚ್ಚಲಾಗಿದೆ.
ಸಂತ್ರಸ್ತ ಮಹಿಳೆ ಮತ್ತು ಮೋಹನ್ ರಾಜ್ ಕಳೆದ 10 ವರ್ಷಗಳಿಂದ ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಮಹಿಳೆಗೆ ಮೊದಲ ಮದುವೆಯಾಗಿದ್ದು, ಪತಿಯೊಂದಿಗೆ ಭಿನ್ನಾಭಿಪ್ರಾಯ ಮತ್ತು ಆತನ ಅನಾರೋಗ್ಯದ ಕಾರಣ 2021 ರಲ್ಲಿ ವಿಚ್ಛೇದನ ಪಡೆದಿದ್ದರು. ಈ ಎಲ್ಲಾ ವಿಚಾರಗಳನ್ನು ತಿಳಿದಿದ್ದ ಮೋಹನ್ ರಾಜ್, ಆಕೆಗೆ ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿ 2022 ರಲ್ಲಿ ವಿವಾಹವಾಗಿದ್ದನು. 2023 ರಲ್ಲಿ ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಜನಿಸಿತ್ತು.
ಮದುವೆಯಾದ ನಂತರ ಮೋಹನ್ ರಾಜ್ ಎಂತವನು ಎನ್ನುವುದು ಬಯಲಾಗಿದೆ. ಸಂತ್ರಸ್ತೆ ಬಳಿ ಮನೆ ಕಟ್ಟೋಣ, ಹೊಸ ಜೀವನ ಶುರು ಮಾಡೋಣ ಎಂದು ನಂಬಿಸಿ, ಮಹಿಳೆಯ ಬಳಿಯಿದ್ದ ಚಿನ್ನಾಭರಣ ಹಾಗೂ ಲೋನ್ ಮಾಡಿಸಿ ಒಟ್ಟು 36 ಲಕ್ಷ ರೂಪಾಯಿ ಆಕೆಯಿಂದ ಪಡೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಮದುವೆಗೆ ಮುಂಚೆ ಮತ್ತು ನಂತರ ಮಹಿಳೆಗೆ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ದಾನೆ ಎನ್ನುವ ಆರೋಪವು ಇದೆ.
2025 ರ ಆರಂಭದಲ್ಲಿ ಮನೆ ಬಿಟ್ಟು ಹೋದ ಮೋಹನ್ ರಾಜ್ ಮತ್ತೆ ವಾಪಸ್ ಬಂದಿಲ್ಲ. ಈಗ ಮಹಿಳೆ ಆತನ ಮನೆಗೆ ಹೋಗಿ ನ್ಯಾಯ ಕೇಳಿದರೆ, ಆಕೆಯ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ʻನೀನ್ಯಾರು ಅಂತಲೇ ನನಗೆ ಗೊತ್ತಿಲ್ಲʼ ಎಂದು ಹೇಳಿರುವುದಾಗಿ ಯುವತಿ ದೂರು ನೀಡಿದ್ದಾರೆ. ಜೊತೆಗೆ ಆತನಿಗೆ ಬೇರೆ ಯುವತಿಯರ ಜೊತೆಗೂ ಸಂಬಂಧವಿದ್ದು, ಅವರೊಂದಿಗೆ ಅಸಭ್ಯ ಸಂದೇಶಗಳನ್ನು ಹಂಚಿಕೊಂಡಿರುವುದು ಮಹಿಳೆಯ ಗಮನಕ್ಕೆ ಬಂದಿದೆ.
ಸದ್ಯ ಆರೋಪಿ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈಗಾಗಲೇ ನಾಲ್ಕು ಬಾರಿ ದೂರು ನೀಡಿದ್ದೇನೆ. ಆದರೆ ಪೊಲೀಸರು ಆತನೊಂದಿಗೆ ಶಾಮೀಲಾಗಿದ್ದಾರೆ
ಮತ್ತೆ ದೂರು ನೀಡಿದರೆ ನಿನ್ನನ್ನೇ ಒಳಗೆ ಹಾಕ್ತೀವಿ ಎಂದು ಪೊಲೀಸರು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.



