ಬೆಂಗಳೂರು: ಹುಚ್ಚು ಪ್ರೇಮಿಯ ಕಾಟಕ್ಕೆ ಬೇಸತ್ತ ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಬೆಂಗಳೂರಿನ ಉತ್ತರ ತಾಲ್ಲೂಕಿನ ಅಂಚೇಪಾಳ್ಯದಲ್ಲಿ ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು 17 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂತ್ರಸ್ಥ ಅಪ್ರಾಪ್ತ ಬಾಲಕಿಯನ್ನು 17 ವರ್ಷದ ತೇಜಸ್ವಿನಿ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಅಂಚೇಪಾಳ್ಯದ ಪ್ರಕೃತಿ ಲೇಔಟ್ ನಿವಾಸಿ ತೇಜಸ್ವಿನಿ (17)ಗೆ ಕಳೆದ ಕೆಲವು ದಿನಗಳಿಂದ ಯುವಕನೋರ್ವ ಪ್ರೀತಿಯ ಹೆಸರಿನಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಕಿರುಕುಳ ತಾಳಲಾರದೆ ಮನನೊಂದ ಬಾಲಕಿ, ತನ್ನ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.



