ಸುರಪುರ: ಕ್ಷೇತ್ರದ ಶಾಸಕ ಅಂದ್ರೆ ನಿಮ್ಮ ಮನೆಯ ಆಳು ಇದ್ದಂತೆ. ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿ. ನಾನು ನಿಮ್ಮ ಮನೆಯ ಆಳಿನಂತೆ ಕೆಲಸ ಮಾಡುತ್ತೇನೆ ಎಂದು ಯಾದಗಿರಿ ಜಿಲ್ಲೆ ಹುಣಸಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ಹೇಳಿದ್ದಾರೆ.
ಕಳೆದ ಬಾರಿ ಪರಾಜಿತಗೊಂಡಿದ್ದ ರಾಜುಗೌಡ ಈ ಬಾರಿ ಸುರಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕೆ ಇಳಿದಿದ್ದಾರೆ. ಈ ಮಧ್ಯೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವವರಿಗೆ ಅವರು ಟಾಂಗ್ ನೀಡಿದ್ದಾರೆ. ಬಹಳಷ್ಟು ಜನ ದುಡ್ಡಿಗಾಗಿ ಬ್ಲ್ಯಾಕ್ಮೇಲ್ ಮಾಡ್ತಿದ್ದರು. ಇಷ್ಟು ದುಡ್ಡು ಕೊಟ್ರೆ ನಿಮ್ಮ ಪಕ್ಷದಲ್ಲೇ ಇರ್ತೇನೆ ಅಂದಿದ್ದರು. ಬೇಡಾ ನೀವು ಹೋಗಿ ಎಂದು ನಾನೇ ಅವರಿಗೆಲ್ಲಾ ಹೇಳಿದೆ.
ಹಾರ ಶಾಲು ಹಾಕಿ ಕೈಮುಗಿದು ಹೇಳಿದ್ದೇನೆ ಬಿಜೆಪಿ ಬಿಟ್ಟು ಹೋಗಿ ಎಂದು. ಇಷ್ಟು ದಿನ ಬಹಳ ಜೀವ ಹಿಂಡಿದ್ದೀರಾ ಈಗ ಸಾಕು ಎಂದೂ ಹೇಳಿದ್ದೇನೆ ಎಂದು ರಾಜುಗೌಡ ಮಾರ್ಮಿಕವಾಗಿ ಹೇಳಿದ್ದಾರೆ.ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಬಿಜೆಪಿ ಮಂಡಳ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕೆಲವರು ಎಂಎಲ್ಎ ಗೆ ಕಾಲು ಮುಗಿದೇ ಜೀವನ ಮಾಡ್ಬೇಕು ಅಂತಾರೆ.
ಎಂಎಲ್ಎ ಅಂದ್ರೆ ದೊಡ್ದ ರಾಕ್ಷಸ ಅಲ್ಲ; ದೇವರಲ್ಲ. ಅವನೊಬ್ಬ ನಿಮ್ಮ ಮನೆಯ ಆಳು ಇದ್ದಂಗೆ ಎಂದು ನಾನು ಹೇಳ್ತೀನಿ. ಎಲೆಕ್ಷನ್ ಬಂದಾಗ ಕಾಲು ಮುಗಿದು, ಬಳಿಕ ನೀ ಯಾರೋ ಎನ್ನುವ ಜಾಯಮಾನ ನನ್ನದಲ್ಲ ಎಂದು ಮತದಾರರ ಗಮನ ಸೆಳೆದಿದ್ದಾರೆ.2004 ರ ಚುನಾವಣೆ ಪ್ರಚಾರದ ವೇಳೆ ವಾಹನಗಳಿಗೆ ಡಿಸೇಲ್ ಹಾಕಿಸಲು ನನ್ನ ಬಳಿ ದುಡ್ಡು ಇರಲಿಲ್ಲ.
ತಂದೆಯವರು ನೀಡಿದ ತಮ್ಮ ನಿವೃತ್ತಿ ಹಣವನ್ನ ಖರ್ಚು ಮಾಡಿ ಚುನಾವಣೆ ಮಾಡಿದ್ದೇನೆ. ಹಣ ಖರ್ಚು ಮಾಡದೆ ಆಗಲೇ ಗೆದ್ದಿದ್ದೇನೆ. ಆದ್ರೆ 2023 ರಲ್ಲಿ ಅತೀ ಹೆಚ್ಚು ಹಣ ಖರ್ಚು ಮಾಡಿಯೂ ಸೋತಿದ್ದೇನೆ. ಆದರೆ ಜನ ದುಡ್ಡಿಗಾಗಿ ಓಟ್ ಹಾಕಲ್ಲ ಅಂತ ಈಗ ಗೊತ್ತಾಗಿದೆ ಎಂದು ರಾಜುಗೌಡ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.