ಮುಂಬೈ: ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಂದ ಸಮುದಾಯವನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಮಕ್ಕಳ ಆರೋಗ್ಯದ ಬಗ್ಗೆ ಸಮಗ್ರ ಮಾಹಿತಿ ನೀಡುವ “ಆಪ್ ಕಿ ಬಾತ್ ಕಮ್ಯುನಿಟಿಕೆ ಸಾಥ್” ಎಂಬ ಮಹತ್ವದ ಅಭಿಯಾನ ಆರಂಭಿಸಲಾಗಿದೆ.
ಅಭಿಯಾನದಲ್ಲಿ ಮೊದಲ ಭಾಗವಾಗಿ ರಕ್ತಹೀನತೆ ಕುರಿತು ಜಾಗೃತಿ ಮೂಡಿಸುತ್ತಿದ್ದು, ನಂತರ ಸ್ಥೂಲಕಾಯತೆ, ಆಟಿಸಂ, ತಲೆಸ್ಸೇಮೀಯಾ ಮತ್ತು ಡೌನ್ ಸಿಂಡ್ರೋಮ್ ಕುರಿತು ಜನ ಜಾಗೃತಿಗೆ ವ್ಯವಸ್ಥೆ ಮಾಡಲಾಗಿದೆ.
ಪ್ರತಿಯೊಬ್ಬರಿಗೂ ಖಚಿತ ಮತ್ತು ಪ್ರಸ್ತುತ ಬದುಕಿನಲ್ಲಿ ಅಗತ್ಯವಿರುವ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ಮತ್ತು ಸಾಮಾಜಿಕ ಆರೋಗ್ಯಕ್ಕೆ ಕೊಡುಗೆ ನೀಡಲು ಈ ಬೆಳವಣಿಗೆ ಸಹಕಾರಿಯಾಗಲಿದೆ. ಸರ್ಕಾರದ ಸಹಭಾಗಿತ್ವ, ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಮಕ್ಕಳಿಗೆ ವಿಶ್ವಾಸಾರ್ಹ ಮಾಹಿತಿ ತಲುಪಿಸುವ ಗುರಿ ಹೊಂದಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2019 ಮತ್ತು 2020 ರ ಸಮೀಕ್ಷೆಯಂತೆ ಫಲವತ್ತತೆಯ ಸಮಯವಾದ 15 ರಿಂದ 49 ವಯೋಮಿತಿಯ ಅರ್ಧದಷ್ಟು ಮಹಿಳೆಯರು ಹಾಗೂ 6 ರಿಂದ 59 ತಿಂಗಳ ವಯೋಮಿತಿಯ ಮಕ್ಕಳಲ್ಲಿ ಶೇ 59 ರಷ್ಟು ಮಕ್ಕಳು ದೇಶದಲ್ಲಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಕಬ್ಬಿಣ, ಫೋಲಿಕ್ ಆಸೀಡ್ ಮತ್ತು ವಿಟಮಿನ್ ಬಿ12 ಕೊರತೆಯಿಂದ ತೊಂದರೆಗೀಡಾಗಿದ್ದಾರೆ.
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಸಂಘಟನೆಯ 2024 ನೇ ಸಾಲಿನ ಅಧ್ಯಕ್ಷ ಡಾ. ಜಿ.ವಿ. ಬಸವರಾಜ ಮಾತನಾಡಿ, ಭಾರತದಲ್ಲಿ ರಕ್ತಹೀನತೆ ಅತಿ ದೊಡ್ಡ ಸಮಸ್ಯೆಯಾಗಿದೆ. ಬಾಲ್ಯದ ರಕ್ತಹೀನತೆಯ ಬಹುಮುಖಿ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಸಮಗ್ರ ಪರಿಹಾರಗಳು ಈ ಸ್ಥಿತಿಯ ತಕ್ಷಣದ ರೋಗಲಕ್ಷಣಗಳು ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಪರಿಹರಿಸಬಹುದು” ಎಂದು ಹೇಳಿದರು.
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಂದ ದೇಶದ ಮಕ್ಕಳ ಕ್ಲಿನಿಕ್ ಗಳ 44 ಸಾವಿರ ಮಕ್ಕಳ ತಜ್ಞರಿಂದ ಹುಟ್ಟಿದಾರಾಭ್ಯ 18 ವಯೋಮಿತಿ ಒಳಗಿನ ಮಕ್ಕಳಿಗೆ “ಅನಿಮಿಯಾಕೆ ಬಾತ್ ಕಮ್ಯುನಿಟಿಕೆ ಸಾಥ್” ಜೊತೆ ಅನಿಮಿಯಾ ಮುಕ್ತ ಭಾರತ” ಅಭಿಯಾನದಡಿ ಉಚಿತ ಅನಿಮೀಯಾ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಸಂಘಟನೆಯ 2024 ನೇ ಸಾಲಿನ ಅಧ್ಯಕ್ಷರಾದ ಡಾ. ವಸಂತ್ ಕಾಲತ್ಕರ್, ನೀತಿ ಆಯೋಗದ ಸದಸ್ಯ ಡಾ. ವಿನೋದ್ ಕೆ ಪಾಲ್, ಪದ್ಮಶ್ರಿ ಪ್ರಶಸ್ತಿ ಪುರಸ್ಕತರೂ ಆದ ಮಕ್ಕಳ ವೈದ್ಯ ಡಾ. ಪುಖ್ರಾಜ್ ಬಪ್ನಾ ಮತ್ತಿತರೆ ಗಣ್ಯರು ಮಕ್ಕಳ ಯೋಗ ಕ್ಷೇಮ ಕುರಿತು ವಿಡಿಯೋ ಮೂಲಕ ಜಾಗೃತಿ ಸಂದೇಶ ನೀಡಿದ್ದು, ಇದನ್ನು ಎಲ್ಲೆಡೆ ಪ್ರಸಾರ ಮಾಡಿ ಅರಿವು ಮೂಡಿಸಲಾಗುತ್ತಿದೆ.