ಬೆಂಗಳೂರು: ಕ್ರಿಕೆಟ್ ಟೀಂ ಇಂಡಿಯಾ ಆಲ್ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಈ ಸಾರಿಯ ವಿಶ್ವಕಪ್ನಿಂದ ಹೊರಗುಳಿಯಲಿದ್ದಾರೆ.
ಅವರ ಸ್ಥಾನಕ್ಕೆ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರು ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಟೀಂ ಇಂಡಿಯಾದ ನಾಲ್ಕನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಚೆಂಡು ಹಿಡಿಯುವ ಸಂದರ್ಭದಲ್ಲಿ ಎಡಗಾಲಿಗೆ ಗಾಯ ಮಾಡಿಕೊಂಡಿದ್ದರು. ಅಲ್ಲಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆ ನಂತರ ಅವರು ಎರಡು ಪಂದ್ಯದಿಂದ ದೂರ ಉಳಿಯುವುದಾಗಿ ಬಿಸಿಸಿಐ ತಿಳಿಸಿತ್ತು. ಆದರೆ, ಇದೀಗ ಟೀಂ ಇಂಡಿಯಾ ವೈದ್ಯರ ಸಲಹೆ ಮೇರೆಗೆ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಈ ಕುರಿತು ಐಸಿಸಿ ಕೂಡ ಟ್ವೀಟ್ ಮಾಡಿದೆ. ಟ್ವೀಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ವಿಶ್ವಕಪ್ನ ಉಳಿದ ಭಾಗವನ್ನು ನಾನು ಕಳೆದುಕೊಳ್ಳುತ್ತೇನೆ ಎಂಬ ವಿಚಾರವನ್ನು ಅರಗಿಸಿಕೊಳ್ಳುವುದು ಕಷ್ಟ.
ಆದರೂ ನಾನು ನಮ್ಮ ತಂಡದೊಂದಿಗೆ ಇರುತ್ತೇನೆ, ಅವರನ್ನು ಹುರಿದುಂಬಿಸುತ್ತೇನೆ. ನನಗೆ ಬೆಂಬಲ ನೀಡಿದ್ದಕ್ಕೆ ನೀಡುತ್ತಿರುವುದಕ್ಕೆ ಧನ್ಯವಾದಗಳು. ನಾವು ವಿಶ್ವಕಪ್ ಎತ್ತಿ ಹಿಡಿಯುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.