ಹೈದರಾಬಾದ್: ಪ್ರಸಕ್ತ ಐಪಿಎಲ್ ಋತುವಿನಲ್ಲಿ ಬ್ಯಾಟಿಂಗ್ ಅಬ್ಬರದ ಮೂಲಕ ಭಾರೀ ಸಂಚಲನ ಮೂಡಿಸಿದ ಸನ್ರೈಸರ್ ಹೈದರಾಬಾದ್ ಗುರುವಾರ ಪ್ಲೇ ಆಫ್ಗೆ ಅಗತ್ಯವಿರುವ ಎರಡಂಕಗಳ ಬೇಟೆಗೆ ಇಳಿಯಲಿದೆ.
ತವರಿನ ಈ ಪಂದ್ಯದಲ್ಲಿ ಕಮಿನ್ಸ್ ಬಳಗಕ್ಕೆ ಎದುರಾಗುವ ತಂಡ ಗುಜರಾತ್ ಟೈಟಾನ್ಸ್. ಮೊನ್ನೆಯ ಮಳೆ ಅಬ್ಬರಕ್ಕೆ ಸಿಲುಕಿದ ಗುಜರಾತ್ ಟೈಟಾನ್ಸ್ ಈಗಾಗಲೇ ಪ್ಲೇ ಆಫ್ ರೇಸ್ನಿಂದ ನಿರ್ಗಮಿಸಿದೆ. ಆದರೆ ತನ್ನ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿ ಮುಗಿಸುವ ಅವಕಾಶವೊಂದು ಗಿಲ್ ಪಡೆಯ ಮುಂದಿದೆ. ಅದೆಂದರೆ, ಹೈದರಾಬಾದ್ ತಂಡವನ್ನು ಅವರದೇ ಅಂಗಳದಲ್ಲಿ ಮಣಿಸುವುದು.
ಆಗ ಪ್ಯಾಟ್ ಕಮಿನ್ಸ್ ಬಳಗ ತನ್ನ ಪ್ಲೇ ಆಫ್ ಪ್ರವೇಶಕ್ಕೆ ಕೊನೆಯ ಪಂದ್ಯದ ತನಕ ಕಾಯಬೇಕಾಗುತ್ತದೆ.ಈಗಿನ ಸಾಧ್ಯತೆ ಪ್ರಕಾರ ಹೈದರಾಬಾದ್ ತನ್ನ ಕೊನೆಯ ಎರಡು ಪಂದ್ಯಗಳನ್ನು ತವರಲ್ಲೇ ಆಡುವ ಕಾರಣ ಗೆಲುವಿನ ನಿರೀಕ್ಷೆಯಲ್ಲಿದೆ. ಕೊನೆಯ ಎದುರಾಳಿ ಪಂಜಾಬ್ ಕಿಂಗ್ಸ್. ಇದು ಕೂಡ ಕೂಟದಿಂದ ನಿರ್ಗಮಿಸಿರುವ ತಂಡ.