ಬೆಂಗಳೂರು: ಇತ್ತೀಚಿಗೆ ಬಿಹಾರ ರಾಜ್ಯದಲ್ಲಿ ನಡೆದಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆ ಬಗ್ಗೆ ನಿಮಗೆ ಮಾಹಿತಿ ಲಭ್ಯವಿರುತ್ತದೆ. ಹಾಲಿ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯಾಗಿಸಿ, ಬಿಹಾರದಲ್ಲಿ ರಾಜಕೀಯ ಮೇಲಾಟವನ್ನು ಬಿಜೆಪಿ ಮಾಡಿದೆ. ಹಾಲಿ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಅವರನ್ನುಕೇಂದ್ರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು. ಬಿಹಾರದಲ್ಲಿ ನಿತೀಶ್ಕುಮಾರ್ ಪುತ್ರನನ್ನು ಉಪ-ಮುಖ್ಯಮಂತ್ರಿ ಮಾಡುವ ಮೂಲಕ ನೆಕ್ಟ್ ಜನರೇಷನ್ ಪಾಲಿಟಿಕ್ಸ್ಗೆ ಬೇಸ್ ಹಾಕುವುದು ಬಿಜೆಪಿಯ ಉದ್ದೇಶ.
ಈಗ ಇದೇ ಮಾದರಿಯಲ್ಲಿ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ಆಗುವ ಮುನ್ಸೂಚನೆ ಕಾಣಸಿಗುತ್ತಿದೆ. ಅಷ್ಟಕ್ಕೂ ಈ ರಾಜಕೀಯ ಕ್ರಾಂತಿ ಏನಾದ್ರೂ ಆಗಿದ್ದೇ ಆದ್ರೆ, ಸಾಲು ಸಾಲು ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದ್ದು, ಇದರಿಂದ ರಾಜ್ಯ ಹಲವು ಘಟ್ಟಗಳನ್ನು ದಾಟಿ, ಇತಿಹಾಸ ನಿರ್ಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಾಗಾದರೆ ಬಿಹಾರ ಮಾದರಿ ಅಂದರೇನು? ಅಲ್ಲಿ ಆಗಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗೂ ನಮ್ಮ ರಾಜ್ಯಕ್ಕೂ ಸಾಮ್ಯತೆ ಹೇಗೆ? ಎಂಬುದನ್ನು ನೋಡುವುದಾದರೆ, ಬಿಹಾರದಲ್ಲಿ ಹಾಲಿ ಮುಖ್ಯಮಂತ್ರಿ ನಿತೀಶ್ಕುಮಾರ್. ಅವರನ್ನೀಗ ರಾಜ್ಯಸಭೆಗೆ ಆಯ್ಕೆ ಮಾಡುವ ಪ್ರಕ್ರಿಯೆ ಶುರುವಾಗಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ದೊಡ್ಡ ಕೂಗು ಕೇಳಿ ಬಂದಿದ್ದು, ಹಾಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ.
ಜೂನ್ 30, 2026 ಕ್ಕೆ ರಾಜ್ಯದ ವಿಧಾನಸಭೆಯಿಂದ ರಾಜ್ಯಸಭೆಗೆ 4 ಸ್ಥಾನಗಳು ಖಾಲಿಯಾಗುತ್ತಿದ್ದು, ಸಂಖ್ಯಾ ಬಲಾಬಲದ ಮೇಲೆ ಕಾಂಗ್ರೆಸ್ಗೆ 3 ಸ್ಥಾನಗಳು ಲಭಿಸುವುದು ನಿಶ್ಚಿತ ಎನ್ನಲಾಗಿದೆ. ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೂಲಕ ಆಯ್ಕೆಯಾದ ಹೆಚ್. ಡಿ.ದೇವೇಗೌಡ, ಬಿಜೆಪಿಯ ಈರಣ್ಣಾ ಕದಾಡಿ, ಬಿ. ನಾರಾಯಣ್ ಅವರ ಅವಧಿ ಮುಕ್ತಾಯವಾಗುತ್ತಿದೆ. ಈ ಸ್ಥಾನಗಳ ಪೈಕಿ ಮಲ್ಲಿಕಾರ್ಜುನ ಖರ್ಗೆ ಪುನಾರಾಯ್ಕೆ ಕಾಂಗ್ರೆಸ್ನಿAದ ಖಚಿತವಾಗಿದೆ. ಇನ್ನು ಹೆಚ್.ಡಿ.ದೇವೇಗೌಡರನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆದಿದ್ದು, ಅವರನ್ನು ಕೂಡ ಪುನಾರಾಯ್ಕೆ ಮಾಡುವುದು ನಿಶ್ಚಿತ ಎನ್ನಲಾಗಿದೆ.
ಇನ್ನುಳಿದ ಎರಡು ಸ್ಥಾನಗಳ ಪೈಕಿ ಒಂದರಲ್ಲಿ ರಾಜ್ಯದ ಹಾಲಿ ಸಿಎಂ ಸಿದ್ಧರಾಮಯ್ಯರನ್ನು ಕಣಕ್ಕಿಳಿಸುವುದು. ಅಹಿಂದ ರಾಜ್ಯ ನಾಯಕನನ್ನು ರಾಷ್ಟ್ರೀಯ ನಾಯಕನನ್ನಾಗಿ ಮಾಡಿ,ರಾಷ್ಟ್ರ ರಾಜಕಾರಣಕ್ಕೆ ಅವರನ್ನು ಬಳಕೆ ಮಾಡಿಕೊಳ್ಳುವ ಮಾಸ್ಟರ್ಪ್ಲಾನ್ ಕಾಂಗ್ರೆಸ್ ಮಾಡಿಕೊಂಡಿದೆ ಎನ್ನಲಾಗಿದೆ.
ಸಿಎಂ ಸಿದ್ಧರಾಮಯ್ಯ ರಾಜ್ಯಸಭೆಗೆ ಪ್ರವೇಶ ಮಾಡುವುದು ಅಂದರೆ, ಹಾಲಿ ಸಿಎಂ ಸ್ಥಾನ ಬಿಟ್ಟು ಕೊಡಬೇಕು. ಸಿದ್ಧರಾಮಯ್ಯರಿಂದ ರಾಜೀನಾಮೆ ಪಡೆದು, ಮುಖ್ಯಮಂತ್ರಿ ಸ್ಥಾನಕ್ಕೆ ಹಾಲಿ ಡಿಸಿಎಂ ಡಿಕೆಶಿ ಅವರನ್ನು ನೇಮಕ ಮಾಡುವುದು. ಸಿದ್ಧರಾಮಯ್ಯರಮ್ನು ರಾಜ್ಯಸಭಾ ಸದಸ್ಯ ಮಾಡಿ, ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಕಾಂಗ್ರೆಸ್ ತನ್ನ ಆದೃಷ್ಟ ಪರೀಕ್ಷೆಗೆ ಇಳಿಯುವುದು ಅವರ ಪ್ಲಾನ್.
ಈ ಮೂಲಕ ಬಿಹಾರದಲ್ಲಿ ಬಿಜೆಪಿ ಏನು ಮಾಡಲು ಹೊರಟಿದ್ಯೋ, ಅದನ್ನೇ ರಾಜ್ಯದಲ್ಲಿ ಕಾಂಗ್ರೆಸ್ ಮಾಡಲು ಚಿಂತನೆ ನಡೆಸಿದೆ ಎಂಬ ಮಾತುಗಳು ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಯಾಗುತ್ತಿದೆ.
ಆದರೆ, ಇದೆಲ್ಲಾ ಆಗುತ್ತೋ, ಆಗುವುದಿಲ್ಲವೋ, ಗೊತ್ತಿಲ್ಲ. ಮೇಲ್ನೋಟಕ್ಕೆ ಇದು ಆಗಿದ್ದು ಆದರೆ, ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಕ್ಷಿಪ್ರ ರಾಜಕೀಯ ಬೆಳವಣೆಗೆ ನಿರೀಕ್ಷಿಸಬಹುದಾಗಿದೆ.
-ಡಾ.ಜಿ.ವೈ ಪದ್ಮನಾಗರಾಜು
ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಆಗುತ್ತಾ, ರಾಜಕೀಯ ಕ್ರಾಂತಿ?



