ಬೆಂಗಳೂರು: 31 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರಸೇವಕನನನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ಹಿಂದೂವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿಯಿಂದ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಎಂಬಾತನನ್ನು ಬಂಧಿಸುವ ಮೂಲಕ ಸರ್ಕಾರ ರಾಮವಿರೋಧಿ ಸರ್ಕಾರ ಎಂಬ ಹಣೆಪಟ್ಟಿಯನ್ನು ಕಟಿಕೊಳ್ಳಲು ಮುಂದಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.ಹುಬ್ಬಳ್ಳಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಶಹರಾ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ.ಧರಣಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಹಾಗೂ ಶಾಸಕ ಕೆ. ಗೋಪಾಲಯ್ಯ ಮಾತನಾಡಿ, ರಾಮನಿಗಾಗಿ ತ್ಯಾಗ ಮಾಡಿದವರನ್ನು ಸರ್ಕಾರ ಬಂಧಿಸಿದೆ. ಮೋದಿ ಪ್ರಧಾನಿಯಾಗಿರುವುದಕ್ಕೆ ರಾಮಮಂದಿರ ನಿರ್ಮಾಣವಾಗಿದೆ.
ಮುಂದಿನ ಚುನಾವಣೆಯಲ್ಲಿ ಸೋಲುತ್ತೇವೆ. ಮತ್ತೆ ಮೋದಿ ಪ್ರಧಾನಿಯಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭಯದಿಂದ ಕರಸೇವಕರನ್ನು ಬಂಧಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರು ಉತ್ತರಕನ್ನಡ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ.