ಗುಂಡ್ಲುಪೇಟೆ: ಹೊಸ ವರ್ಷದ ಮೊದಲ ದಿನ ತಾಲ್ಲೂಕಿ ಪ್ರಸಿದ್ಧ ಪ್ರವಾಸಿಗರ ಸ್ಥಳ ಗೋಪಾಲಸ್ವಾಮಿ ಬೆಟ್ಟಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಸಫಾರಿಯಲ್ಲಿ ಪ್ರವಾಸಿಗರ ಜನಸಾಗರವೇ ನೆರೆದಿತ್ತು.
ಹೊಸ ವರ್ಷದ ಆಚರಣೆಗೆ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಪ್ರವಾಸಿಗರು ಗುಂಡ್ಲುಪೇಟೆ ಹಾಗೂ ಬಂಡೀಪುರ ಅರಣ್ಯದಂಚಿನ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದರು.ಸೋಮವಾರ ಮುಂಜಾನೆ ಗೋಪಾಲಸ್ವಾಮಿ ಬೆಟ್ಟಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಬೆಟ್ಟಕ್ಕೆ ತೆರಳಿ, ಗೋಪಾಲನ ದರ್ಶನ ಪಡೆದು ಹಿಮದ ಸವಿಯನ್ನು ಸವಿದು ಸೆಲ್ಫಿ ಕ್ಲಿಕ್ಕಿಸುತಿದ್ದ ದೃಶ್ಯಗಳು ಬೆಟ್ಟದಲ್ಲಿ ಕಂಡು ಬಂದವು.
ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಬಳಿ ಖಾಸಗಿ ವಾಹನಗಳ ಪಾರ್ಕಿಂಗ್ ಮಾಡಿದ ಪ್ರವಾಸಿಗರು ಮಧ್ಯಾಹ್ನದ ನಂತರ ವಾಹನಗಳ ಸಂಖ್ಯೆ ಏರಿಕೆಯಾಗಿ ವ್ಯಾಪಾರಸ್ಥರಿಗೆ ಭರ್ಜರಿ ವ್ಯಾಪಾರವಾಯಿತು.
ಸಾಮಾನ್ಯ ದಿನಗಳಲ್ಲಿ ಗೋಪಾಲಸ್ವಾಮಿ ಬೆಟ್ಟಕ್ಕೆ 4 ಬಸ್ ಗಳು ಸಂಚರಿಸುತಿದ್ದವು, ಸೋಮವಾರ ಹೊಸ ವರ್ಷದ ದಿನ ಹೆಚ್ಚಿನ ಪ್ರವಾಸಿಗರು ಆಗಮಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 20 ಬಸ್ ಗಳನ್ನು ಗೋಪಾಲಸ್ವಾಮಿ ಬೆಟ್ಟಕ್ಕೆ ಬಿಡಲಾಗಿದ್ದು ಪ್ರಯಾಣಿಕರ ಸಂಖ್ಯೆ ಹೆಚ್ಚು ಆದರೆ ಮತ್ತಷ್ಟು ಬಸ್ ಗಳನ್ನು ಬಿಡಲಾಗುತ್ತದೆ ಎಂದು ಗುಂಡ್ಲುಪೇಟೆ ಡಿಪೋ ವ್ಯವಸ್ಥಾಪಕಿ ಪುಪ್ಷಾ ತಿಳಿಸಿದರು.
ಗೋಪಾಲಸ್ವಾಮಿ ಬೆಟ್ಟವನ್ನು ಹೊರತುಪಡಿಸಿ ತಾಲ್ಲೂಕಿನ ಮತ್ತೊಂದು ಯಾತ್ರ ಸ್ಥಳವಾದ ತೆರಕಣಾಂಬಿ ಬಳಿಯ ಹುಲಗಿನಮುರುಡಿ ವೆಂಕಟರಮಣಸ್ವಾಮಿ, ಪಾರ್ವತಿ ಬೆಟ್ಟ ಹಾಗೂ ತ್ರಿಯಂಬಕಪುರದ ತ್ರಿಯಂಬಕೇಶ್ವರ ದೇವಸ್ಥಾನಕ್ಕೂ ಭಕ್ತಾದಿಗಳು ತೆರಳಿ ದೇವರ ದರ್ಶನ ಪಡೆದರು.