ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ವಾಹನಗಳ ಅಪಘಾತ ಸಂಭವಿಸಿ ಐದು ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬೆಂಗಳೂರು- ತುಮಕೂರು ರಸ್ತೆಯ ಹಳೆ ನಿಜಗಲ್ ಬಳಿ ಅಪರಿಚಿತ ವಾಹನ ಸುಮಾರು ೪೫ ವರ್ಷದ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿರುತ್ತಾರೆ. ಮತ್ತೊಂದು ಪ್ರಕರಣ ಕುಣಿಗಲ್ ಬೈಪಾಸ್ ರಸ್ತೆಯ ಬಳಿ ಲಾರಿ ಪಾದಚಾರಿ ನಿರ್ಮಲ (೭೩)ಎಂಬ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ಜರುಗಿದೆ. ಮತ್ತೊಂದು ಪ್ರಕರಣ ತುಮಕೂರು ರಸ್ತೆಯ ದೇವಣ್ಣನ ಪಾಳ್ಯದ ಬಳಿ ಅಪರಿಚಿತ ವಾಹನ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿಂಟು (೨೫)ಸಾವನ್ನಪ್ಪಿದ್ದು, ಈತ ಬಿಹಾರ್ ರಾಜ್ಯದವನು ಎನ್ನಲಾಗಿದೆ.
ಹಾಗೂ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ವೀರಣ್ಣ ಪಾಳ್ಯದ ಬಳಿ ಲಾರಿ ಮೋಟಾರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಸಿನ್ (೨೬) ಕೇರಳ ಮೂಲದ ವ್ಯಕ್ತಿ, ಹೆಬ್ಬಾಳದ ಖಾಸಗಿ ಹೋಟೆಲಲ್ಲಿ ಕೆಲಸ ಮುಗಿಸಿ ರಾತ್ರಿ ಒಂದು ಗಂಟೆ ೨೦ ನಿಮಿಷಕ್ಕೆ ದೊಮ್ಮಲೂರಿನ ಮನೆಗೆ ಹೋಗುವ ಸಮಯದಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಿರುತ್ತಾನೆ.
ಮತ್ತೊಂದು ಪ್ರಕರಣದಲ್ಲಿ ಕೆಜಿ ಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರು ರಸ್ತೆಯಲ್ಲಿ ಮೋಟರ್ ಬೈಕ್ ಸವಾರ ಕಾರ್ತಿಕ್ (೨೮) ಅತಿ ವೇಗವಾಗಿ ಮೋಟರ್ ಬೈಕ್ ಚಲಾಯಿಸಿ ಕಂಬಕ್ಕೆ ಡಿಕ್ಕಿ ಹೊಡೆದುಕೊಂಡು ಮೃತಪಟ್ಟಿರುತ್ತಾನೆ.



