ಬೆಂಗಳೂರು: ನಗರದಲ್ಲಿ ನಿನ್ನೆ ಮಧ್ಯರಾತ್ರಿ ಸಂಭವಿಸಿದ ಎರಡು ಭಾರೀ ಅಗ್ನಿ ಅವಘಡಗಳಲ್ಲಿ ಎರಡು ಬಟ್ಟೆ ಶೋರೂಂಗಳು ಬೆಂಕಿಗಾಹುತಿಯಾಗಿವೆ. ಒಂದು ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಹಾಗೂ ಇನ್ನೊಂದು ಮಲ್ಲೇಶ್ವರಂನಲ್ಲಿ ಸಂಭವಿಸಿವೆ.
ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಬೆಂಕಿನ ಕೆನ್ನಾಲಿಗೆಗೆ ಲೂಯಿಸ್ ಫಿಲಿಪ್ ಬಟ್ಟೆ ಶೋರೂಂ ಸುಟ್ಟು ಕರಕಲಾಗಿದೆ.
ಮೂರಂತಸ್ತಿನ ಕಟ್ಟಡ ಧಗ ಧಗನೆ ಹೊತ್ತಿ ಉರಿದಿದ್ದು, ಕಟ್ಟಡದ ಮುಂದೆ ಇದ್ದ ತೆಂಗಿನ ಮರಕ್ಕೂ ಬೆಂಕಿ ಚಾಚಿಕೊಂಡಿತು. ಅಂಗಡಿ ಪಕ್ಕದಲ್ಲಿದ್ದ ಟ್ರಾನ್ಸ್ ಫಾರ್ಮರ್ ಕೂಡ ಬೆಂಕಿಗಾಹುತಿಯಾಗಿದೆ. ಮೂರಂತಸ್ತಿನಲ್ಲಿದ್ದ ಬಟ್ಟೆ ಶೋ ರೂಂ ಮಾತ್ರವಲ್ಲದೆ ಪಕ್ಕದ ಕಟ್ಟಡದಲ್ಲಿದ್ದ ಮೂರ್ನಾಲ್ಕು ಅಂಗಡಿಗಳಿಗೂ ಬೆಂಕಿ ತಗುಲಿದೆ. ನಿನ್ನೆ ರಾತ್ರಿ 11.45ರ ಸುಮಾರಿಗೆ ಘಟನೆ ನಡೆದಿದೆ.
ಬೆಂಕಿ ಕಿಡಿ ಹೊತ್ತಿಕೊಂಡಿದ್ದು ಹೇಗೆ ಎಂಬುದು ನಿಗೂಢವಾಗಿದೆ. ಅಂಗಡಿ ಪಕ್ಕದಲ್ಲೇ ಇದ್ದ ಟ್ರಾನ್ಸ್ ಫಾರ್ಮರ್ ಬೆಂಕಿ ಚಾಚಿರುವ ಸಂಶಯ ಇದೆ. ಮುಖ್ಯ ರಸ್ತೆವರೆಗೂ ಚಾಚಿಕೊಂಡಿದ್ದ ಬೆಂಕಿಯ ಆರ್ಭಟ ಕಂಡು ವಾಹನ ಸವಾರರು ಬೆಚ್ಚಿಬಿದ್ದರು. ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿದವು. ಬೆಂಕಿ ಹೊತ್ತಿಕೊಂಡ ಕಟ್ಟಡದಲ್ಲಿದ್ದ ನಾಲ್ವರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಯಿತು. ಬೆಂಕಿ ಹಬ್ಬುತ್ತಿದ್ದಂತೆ ಇವರು ಪಕ್ಕದ ಕಟ್ಟಡಕ್ಕೆ ಜಂಪ್ ಆಗಿದ್ದರು.
ಒಬ್ಬನನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರ ತಂದರು.ಮಲ್ಲೇಶ್ವರ ಮುಖ್ಯ ರಸ್ತೆಯಲ್ಲಿರುವ ಒಂದು ಬಟ್ಟೆ ಅಂಗಡಿಯಲ್ಲೂ ಬೆಂಕಿ ಅನಾಹುತ ಸಂಭವಿಸಿದೆ. ಲಕ್ಷಾಂತರ ಮೌಲ್ಯದ ಬಟ್ಟೆಗಳು ಸುಟ್ಟು ಕರಕಲಾಗಿವೆ. ಶಾರ್ಟ್ ಸಕ್ರ್ಯೂಟ್ನಿಂದಾಗಿ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ಆರಿಸಿದ್ದಾರೆ.