ಬೆಂಗಳೂರು: ಬೊಮ್ಮನಹಳ್ಳಿಯಲ್ಲಿರುವ ಪ್ರತಿಷ್ಠಿತ ಖಾಸಗಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಚಂದಾಪುರ ನಿವಾಸಿ, ಪರಿಮಳ ಹಾಗೂ ಭೋದೇವಯ್ಯ ದಂಪತಿ ಪುತ್ರಿ ಯಶಸ್ವಿನಿ (23) ಮೃತ ವಿದ್ಯಾರ್ಥಿನಿ. ಕಣ್ಣು ನೋವಿನ ಕಾರಣಕ್ಕೆ ಯಶಸ್ವಿನಿ ಬುಧವಾರ ಕಾಲೇಜಿಗೆ ರಜೆ ಹಾಕಿದ್ದಳು. ಗುರುವಾರ ಕಾಲೇಜಿಗೆ ಹೋದಾಗ ಆಕೆಯನ್ನು ಪ್ರಾಧ್ಯಾಪಕರು, ಪ್ರಾಂಶುಪಾಲರು ತೀವ್ರವಾಗಿ ಅವಮಾನಿಸಿದ್ದರು ಎಂದು ಆರೋಪಿಸಲಾಗಿದೆ.
‘‘ಕಣ್ಣಿಗೆ ಯಾವ ಡ್ರಾಫ್ಸ್ ಬಳಸಿದೆ ? ಎಷ್ಟು ಹನಿ ಡ್ರಾಫ್ಸ್ ಹಾಕಿದೆ ? ಪೂರ್ತಿ ಬಾಟಲ್ ಹಾಕಿಕೊಂಡಿದ್ದೀಯಾ ? ಎಂದು ವ್ಯಂಗ್ಯವಾಡಿದ್ದಾರೆ. ಇದರಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ,’’ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸಲು ಒತ್ತಾಯಿಸಿ, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬೊಮ್ಮನಹಳ್ಳಿ ಪೊಲೀಸರು, ಕಾಲೇಜು ಆಡಳಿತ ಮಂಡಳಿ ಪ್ರತಿನಿಧಿಗಳು ವಿದ್ಯಾರ್ಥಿಗಳ ಮನವೊಲಿಸಿದರು. ಯಶಸ್ವಿನಿ ಭಾವಚಿತ್ರ ಹಿಡಿದು ‘ಜಸ್ಟಿಸ್ ಫಾರ್ ಯಶಸ್ವಿನಿ’ ಎಂದು ಘೋಷಣೆ ಕೂಗಿದರು. ಕಾಲೇಜಿನ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಇತರ ವಿದ್ಯಾರ್ಥಿಗಳಿಗೂ ಇದೇ ರೀತಿಯ ಕಿರುಕುಳ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು, ಪ್ರಾಂಶುಪಾಲರು ಮತ್ತು ಸಂಬಂಧಪಟ್ಟ ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕುಟುಂಬದ ದೂರಿನ ಮೇರೆಗೆ ಸೂರ್ಯ ಸಿಟಿ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.



