ರವೀಂದ್ರ ಕಲಾ ಕ್ಷೇತ್ರದ ಸರಳ ರಂಗಸಜ್ಜಿಕೆಯ ವೇದಿಕೆಯ ಮೇಲೆ ಪಾದರಸದ ಮಿಂಚಿನ ಕಾರಂಜಿಯಾಗಿ ಲವಲವಿಕೆಯಿಂದ ನರ್ತಿಸುತ್ತಿದ್ದ ಕಲಾವಿದೆ ಪ್ರೇಮಾ, ತನ್ನ ರಂಗಪ್ರವೇಶದ ಸ್ಮರಣೀಯ ದಿನದಂದು ಕಲಾರಸಿಕರೆಲ್ಲರ ಮೆಚ್ಚುಗೆಯನ್ನು ಪಡೆದಿದ್ದಳು. ನೃತ್ಯಕ್ಕೆ ಹೇಳಿ ಮಾಡಿಸಿದ ಮಾಟವಾದ ಶರೀರ ಹೊಂದಿದ್ದ ನರ್ತಕಿ, ಗುರುಗಳ ಪರಿಶ್ರಮ-ತರಬೇತಿಯ ಪ್ರತಿಬಿಂಬವಾಗಿ ಕಲಾಪ್ರಪೂರ್ಣ ನೃತ್ಯದ ಆಯಾಮಗಳನ್ನು ಪ್ರದರ್ಶಿಸುತ್ತ ಲೀಲಾಜಾಲವಾಗಿ ನರ್ತಿಸಿ `ಮಾರ್ಗಂ’ ಸಂಪ್ರದಾಯದ ರೀತ್ಯ ನೃತ್ಯಾರ್ಪಣೆ ಮಾಡಿದಳು.
`ಅಭಿವ್ಯಕ್ತಿ ಕಲ್ಚುರಲ್ ಟ್ರಸ್ಟ್’ನ ಗುರು ಕಲಾಯೋಗಿ ವಿದ್ವಾನ್ ಎಸ್. ರಘುನಂದನ್ ಅವರ ಅಸ್ಮಿತೆ ಪ್ರದರ್ಶನದಲ್ಲಿ ಎದ್ದುಕಾಣುತ್ತಿತ್ತು. ಅವರ ಶಿಷ್ಯರ ಪ್ರತಿ ರಂಗಪ್ರವೇಶವೂ ಒಂದಕ್ಕಿಂತ ಒಂದು ಭಿನ್ನವಾದ ಬಗೆಯಲ್ಲಿ , ಆಯಾ ಕಲಾವಿದರ ನೃತ್ಯ ಸಾಮರ್ಥ್ಯ, ನೈಪುಣ್ಯಕ್ಕೆ ಅನುಗುಣವಾಗಿ ಕೃತಿಗಳ ಆಯ್ಕೆ ಮತ್ತು ನೃತ್ಯಸಂಯೋಜನೆ ಮಾಡುವುದು ಅವರ ವೈಶಿಷ್ಟ್ಯ. ವಿಶೇಷವಾಗಿ ಈ ಸಂದರ್ಭಕ್ಕೆಂದೇ ಹೊಸಕೃತಿಗಳ ರಚನೆ, ನೃತ್ಯಸಂಯೋಜನೆ ಗುರುಗಳ ಅಪಾರ ಕಾಳಜಿ-ಪರಿಶ್ರಮಗಳ ಅಭಿವ್ಯಕ್ತಿಯಾಗಿತ್ತು.
`ಪುಷ್ಪಾಂಜಲಿ’- ನೃತ್ತನಮನದ ಕೃತಜ್ಞತಾ ಸಮರ್ಪಣೆಯೊಂದಿಗೆ ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದ ಕಲಾವಿದೆ, ಆದಿಪೂಜಿತ ಗಣನಾಥನಿಗೆ ಸುಮನೋಹರ ಆಂಗಿಕಾಭಿನಯದಿಂದ- ಕಣ್ಣಿಗೆ ಕಟ್ಟುವ ಶಿಲ್ಪಸದೃಶ ಭಂಗಿಗಳಿಂದ `ವಿಘ್ನ ರಾಜಂ ಭಜೆ’ ಎಂದು ನೃತ್ಯಪೂಜೆ ಸಲ್ಲಿಸಿದಳು. ವಿಶೇಷವೆಂದರೆ ಈ ಕೃತಿಯನ್ನು ಉತ್ತಕ್ಕಾಡು ವೆಂಕಟಸುಬ್ಬಯ್ಯರ್ ಒಂದು ಮಲ್ಲಾರಿಯ ರೀತಿಯಲ್ಲಿ ರಚಿಸಿದ್ದಾರೆ.ಅನಂತರ ಮೂಡಿಬಂದ `ಅಲರಿಪು’- ನೃತ್ಯವ್ಯಾಕರಣದ ಬಹುತೇಕ ಅಂಶಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದ್ದು ಮುದನೀಡಿತು.
ಕೆಲವು ಅಪರೂಪದ ಕೃತಿಗಳಿಗೆ ನೃತ್ಯಸಂಯೋಜಿಸಿ ಹೊಸತನ ಸಿಂಚನಗೊಳಿಸುವ ಪರಿಪಾಠವುಳ್ಳ ಗುರುಗಳು ಕಲಿಸಿದ್ದನ್ನು ಶಿಷ್ಯೆ, ಯಥಾವತ್ತಾಗಿ ಅಷ್ಟೇ ಸುಂದರವಾಗಿ ನಿರೂಪಿಸಿದಳು. ಬಳ್ಳಾರಿ ಶೇಷಗಿರಿ ಆಚಾರ್ ರಚಿಸಿದ ಸ್ಕಂಧನ ಮಹತ್ವ, ವೈಶಿಷ್ಟ್ಯವನ್ನು ಚಿತ್ರಿಸಿದ `ವಲ್ಲಿ ಮನೋಹರನೇ’ ಕೃತಿಯನ್ನು ಪ್ರೇಮಾ ತನ್ನ ರಮ್ಯಾಭಿನಯದಿಂದ ಸಾಕ್ಷಾತ್ಕರಿಸಿದಳು. ಮುಂದೆ- ಭರತನಾಟ್ಯದ ಹೃದಯಭಾಗ `ವರ್ಣ’ ಅಷ್ಟೇ ಹೃದ್ಯವೂ ಆಗಿತ್ತು. – ನೃತ್ತ ಮತ್ತು ಅಭಿನಯ ಎರಡರಲ್ಲೂ ಸಮಾನ ಪ್ರಭುತ್ವ ನಿರೀಕ್ಷಿಸುವ `ವರ್ಣ’ದಂಥ ದೀರ್ಘಬಂಧ ಕಲಾವಿದರಿಗೆ ಸವಾಲು ಎನ್ನಬಹುದು.
ಈ ಎರಡೂ ಪರೀಕ್ಷೆಗಳಲ್ಲಿ ಕಲಾವಿದೆ ಸುಲಭವಾಗಿ ತೇರ್ಗಡೆಯಾದಳು. ಮಿಂಚಿನ ಸಂಚಾರದ ನೃತ್ತಾವಳಿಗಳು, ಭಾವಪೂರ್ಣ ಅಭಿನಯಗಳಿಂದ ಕಾರ್ತಿಕೇಯನನ್ನು ಕಣ್ಣೆದುರು ತಂದು ನಿಲ್ಲಿಸಿದಳು. ರಘುನಂದನರ ಸ್ಫುಟವಾದ ನಟುವಾಂಗದ ವಾಗ್ಝರಿ ಕಲಾವಿದೆಯ ಉತ್ಸಾಹದ ನರ್ತನಕ್ಕೆ ಇಂಬು ನೀಡಿತು. ಅಂದು ಪ್ರೇಮಾ ಸಾಕಾರಗೊಳಿಸಿದ ಭಕ್ತಿಪ್ರಧಾನ `ವರ್ಣ’-ಸ್ವಾಮಿ ವೇದಾಂತ ದೇಶಿಕರ್ ರವರ ಮೇರುಕೃತಿ `ಶ್ರೀ ಸುದರ್ಶನಾ ಅಷ್ಟಕ’.
ಇಲ್ಲಿಯವರೆಗೆ ವಿರಳವೆನಿಸಿದ ಸುದರ್ಶನ ಚಕ್ರದಂಥ ಹೊಸ ನೃತ್ಯವಸ್ತುವಿಗೆ ವಿವಿಧ ಪರಿಕಲ್ಪನೆಯಲ್ಲಿ `ವರ್ಣ’ದ ಚೌಕಟ್ಟಿನಲ್ಲಿ ನರ್ತನದ ದೃಶ್ಯರೂಪವಿತ್ತು ವಿನೂತನ ಅನುಭವ ತೆರೆದಿಟ್ಟ ರಘುನಂದನರ ಪ್ರಯತ್ನ ಗಮನಾರ್ಹವಾಗಿತ್ತು. ಸುದರ್ಶನ ಚಕ್ರದ ಮಹತ್ವ ಸಾರಿದ, ವಿವಿಧ ಸುಂದರ ಸಂಚಾರಿ ಕಥಾನಕಗಳ ಮೂಲಕ ಚಿತ್ರಿಸಲಾದ `ವರ್ಣ’ದ ನಿರೂಪಣೆಯಲ್ಲಿ ಕಲಾವಿದೆ ನಿರಾಯಾಸವಾಗಿ ತೋರಿದ ವಿವಿಧ ಬಗೆಯ ಚಾರಿ-ಕರಣಗಳು, ಅದರಲ್ಲೂ ಮುಖ್ಯವಾಗಿ ಆಕಾಶಚಾರಿಗಳು, ಭ್ರಮರಿಗಳು, ರಂಗಾಕ್ರಮಣದ ಆಂಗಿಕ-ಹೆಜ್ಜೆ-ಗೆಜ್ಜೆಗಳ ಕಲಾಕೌಶಲ್ಯ ಆನಂದದಾಯಕವಾಗಿದ್ದವು.
ಪ್ರಸ್ತುತಿಯ ಉತ್ತರಾರ್ಧದಲ್ಲಿ ಕಲಾವಿದೆ ಅನಾವರಣಗೊಳಿಸಿದ ಒಂದೊಂದು ಕೃತಿಗಳೂ ಭಾವಪೂರ್ಣವಾಗಿದ್ದವು. ಶಿವ-ಶಿವೆಯರ ಸುತ್ತಲಿನ ಘಟನೆಗಳನ್ನು ಆಧರಿಸಿ ಅಲ್ಲಿ ಮಿಡಿವ ನವರಸಗಳನ್ನು ಉಮಾ ಮಹೇಶ್ವರ ನವರಸ ಕೃತಿಯಲ್ಲಿ ಚೇತೋಹಾರಿಯಾಗಿ ಚಿತ್ರಿಸಲಾಯಿತು. ನಂತರ ಜಯದೇವ ಕವಿಯ `ಅಷ್ಟಪದಿ’ಗೆ ಕಲಾವಿದೆ ಜೀವತುಂಬಿ, ರಾಧೆಯ ವಿರಹೋತ್ಕರ್ಷತೆಗೆ ಕನ್ನಡಿ ಹಿಡಿದು ರಸಾಭಿನಯದೊಂದಿಗೆ ನರ್ತಿಸಿದಳು. ಮುಂದೆ- ರಾಮಭಜನೆಯಲ್ಲಿ ರಾಮಾಯಣದ ಕೆಲವು ಘಟನೆಗಳ ಮೇಲೆ ಬೆಳಕು ಚೆಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸಿದ ಪ್ರೇಮಳ ಸಾತ್ವಿಕಾಭಿನಯ ಆಹ್ಲಾದ ನೀಡಿತು. ಅಂತ್ಯದಲ್ಲಿ ಬೇಹಾಗ್ ರಾಗದ `ತಿಲ್ಲಾನ’ದೊಂದಿಗೆ ಕಲಾವಿದೆ ತನ್ನ ಪ್ರಸ್ತುತಿಯನ್ನು ಮನಮೋಹಕವಾಗಿ ಸಂಪನ್ನಗೊಳಿಸಿದಳು.
ವೈ.ಕೆ.ಸಂಧ್ಯಾ ಶರ್ಮ