`ಮಾಂತ್ರಿಕ’ ಹೀಗೊಂದು ವಿಭಿನ್ನ ಟೈಟಲ್ ಇಟ್ಟುಕೊಂಡು ಕನ್ನಡದಲ್ಲಿ ಚಲನಚಿತ್ರವೊಂದು ನಿರ್ಮಾಣವಾಗಿದೆ, ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಲಾಂಛನದಲ್ಲಿ ವ್ಯಾನವರ್ಣ ಜಮ್ಮುಲ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಹಾಗೂ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ, ಈಗಾಗಲೇ ತನ್ನೆಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಮೇಕಿಂಗ್ ವಿಡಿಯೋ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಇದೊಂದು ಘೋಸ್ಟ್ ಹಂಟರ್ ಸುತ್ತ ನಡೆಯುವ ಇಂಟಲೆಕ್ಚುಯಲ್, ಸಸ್ಪೆನ್ಸ್, ಥ್ರಿಲ್ಲರ್ ಕಥೆಯಾಗಿದ್ದು, ದೆವ್ವ ಅನ್ನೋದು ಇದೆಯೋ ಇಲ್ಲವೋ ಅಥವಾ ಅದೆಲ್ಲಾ ನಮ್ಮ ಭ್ರಮೆಯೋ ಎಂಬ ವಿಷಯದ ಮೇಲೆ ಈ ಚಿತ್ರ ಸಾಗುತ್ತದೆ. ರಾಧಿಕಾ ಮಾಲಿ ಪಾಟೀಲ ಹಾಗೂ ಮೈಥಿಲಿ ನಾಯಕ್ ಚಿತ್ರದ ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕ, ನಾಯಕ ವ್ಯಾನವರ್ಣ ಮಾತನಾಡಿ ನಾನು ಐಟಿ ಬ್ಯಾಕ್ ಗ್ರೌಂಡ್ನಿಂದ ಬಂದವನು. ಮೊದಲಬಾರಿಗೆ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ, ಆರಂಭದಲ್ಲಿ ಇದನ್ನಿ ಪುನೀತ್ ರಾಜ್ಕುಮಾರ್ ಅವರನ್ನು ಹಾಕಿಕೊಂಡು ವೆಬ್ ಸೀರೀಸ್ ಮಾಡಬೇಕು ಅಂದುಕೊಂಡಿದ್ದೆ, ಅದಾಗಲ್ಲ ಅಂದಾಗ, ಸ್ನೇಹಿತರ ಸಲಹೆಯಂತೆ ಸಿನಿಮಾ ಮಾಡೋ ಯೋಚನೆ ಬಂತು.
ಮನುಷ್ಯರು ದೆವ್ವಗಳನ್ನು ನಂಬುತ್ತಾರೆ, ದೆವ್ವ ಇದೆಯೋ, ಇಲ್ವೋ, ಇದ್ರೆ ಅದು ಹೇಗಿರುತ್ತೆ, ಅಥವಾ ಇದೇನು ಸೈಕಲಾಜಿಕಲ್ ಫೀಲಿಂಗೋ ಅನ್ನೋದೇ ಈ ಚಿತ್ರದ ಕಾನ್ಸೆಪ್ಟ್, ನಾಯಕ ಕೃಷ್ಣ ಸಿಟಿಆರ್(ಕಮ್ ಟು ರಿಯಾಲಿಟಿ) ಅನ್ನೋ ಅರ್ಗನೈಜೇಶನ್ ಇಟ್ಟುಕೊಂಡಿರುತ್ತಾನೆ. ದೆವ್ವಗಳನ್ನು ಹುಡುಕಿಕೊಂಡು ಹೋಗುವುದು, ದೆವ್ವಗಳ ಬಗ್ಗೆ ಕೇಳಿಕೊಂಡು ಬಂದವರಿಗೆ ಸಲಹೆ ನೀಡುವುದು, ಯಾರಾದ್ರೂ ತಮ್ಮ ಮನೆಯಲ್ಲಿ ದೆವ್ವ ಇದೆ ಅಂತ ಬಂದಾಗ ಅವರಿಗೆ ಅದೆಲ್ಲ ಇಲ್ಲ ಎಂದು ಪ್ರೂವ್ ಮಾಡುವುದು ಈತನ ಕೆಲಸ.
ಬೆಂಗಳೂರು, ಮಂಗಳೂರು ಅಲ್ಲದೆ ಬೆಂಗಳೂರಿನ ಮಾಲ್ವೊಂದರಲ್ಲಿ 30ರಿಂದ 40 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಿದ್ದೇವೆ. ಮಾಲ್ನಲ್ಲಿ ಶೂಟ್ ಮಾಡುವಾಗ ಚಿತ್ರತಂಡಕ್ಕೆ ಸಾಕಷ್ಟು ವಿಚಿತ್ರ ಅನುಭವಗಳಾದವು, ಪ್ರಾರಂಭದಲ್ಲಿದ್ದ ಕ್ಯಾಮೆರಾಮ್ಯಾನ್ ಭಯಗೊಂಡು ಬಿಟ್ಟುಹೋದರು, ಅಲ್ಲದೆ ಆರಂಭದಲ್ಲಿ 40 ರಿಂದ 50 ಜನರಿದ್ದ ಚಿತ್ರತಂಡ ಕೊನೆಗೆ 20 ಕ್ಕಿಳಿಯಿತು,ಈಗಾಗಲೇ ಚಿತ್ರದ ಎಲ್ಲಾ ಕೆಲಸಗಳು ಮುಗಿದು ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ ಎಂದರು.