ಕ್ರಿಕೆಟ್ ಅಭ್ಯಾಸದ ವೇಳೆ ಚೆಂಡು ತಲೆಗೆ ತಗಲಿ ಯುವ ಕ್ರಿಕೆಟಿಗನೊಬ್ಬ ಮೃತಪಟ್ಟ ದಾರುಣ ಘಟನೆ ಆಸ್ಟ್ರೇಲಿಯಾದ ಮೆಲ್ಬರ್ನ್ ನ ಫೆರ್ನ್ಟ್ರೀ ಗಲ್ಲಿಯ
ವಾಲೀ ಟ್ಯೂವ್ ರಿಸರ್ವ್ನಲ್ಲಿ ನಡೆದಿದೆ. ಸ್ಥಳೀಯ ಫೆರ್ನ್ಟ್ರೀ ಗಲ್ಲಿ ಕ್ರಿಕೆಟ್ ಕ್ಲಬ್ನಲ್ಲಿ ತಾಲೀಮು ನಡೆಸುತ್ತಿದ್ದ ೧೭ ವರ್ಷದ ಬೆನ್ ಆಸ್ಟಿನ್ ಮೃತಪಟ್ಟ ಬಾಲಕ. ಮರ್ವ್ ಹ್ಯೂಸ್ ದುರಂತದ ಬಳಿಕ ನಡೆದಿರುವ ಈ ಘಟನೆ ಕ್ರಿಕಟ್ ವಲಯಕ್ಕ ತೀವ್ರ  ಆಘಾತ ನೀಡಿದ್ದು ಆಟಗಾರನ ಕುಟುಂಬ, ಸ್ನೇಹಿತರು ಶೋಕದಲ್ಲಿ ಮುಳುಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಬೆನ್ ಆಸ್ಚಿನ್ ಅಟೋಮ್ಯಾಟಿಕ್ ಬೌಲಿಂಗ್ ಯಂತ್ರದಿಂದ ಬರುವ ಚೆಂಡುಗಳನ್ನು ಎದುರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಚೆಂಡು ಆತನ ತಲೆ ಮತ್ತು ಕುತ್ತಿಗೆಗೆ ಬಡಿದಿದ್ದು ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರ ನಿರಂತರ ಪ್ರಯತ್ನಗಳ ಹೊರತಾಗಿಯೂ, ಬುಧವಾರ ಕೊನೆಯುಸಿರೆಳೆದಿದ್ದಾನೆ. ರಮಣ್ ಲಾಂಬಾ- ಫಿಲ್ ಹ್ಯೂಸ್ ದುರಂತ ಭಾರತದ ಕ್ರಿಕೆಟರ್ ರಮಣ್ ಲಾಂಬಾ ಅವರು ೧೯೯೮ರಲ್ಲಿ ಬಾಂಗ್ಲಾದೇಶದ ಡಾಕಾದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಚೆಂಡು ತಲೆಗೆ ಬಡಿದು ಮೃತ ಪಟ್ಟಿದ್ದರು. ೨೦೧೪ರಲ್ಲಿ ಆಸ್ಟ್ರೇಲಿಯಾದ ಫಿಲಿಪ್ ಹ್ಯೂಸ್ ಅವರು ಸೀನ್ ಅಬಾಟ್ ಅವರ ಬೌನ್ಸರ್ ಅನ್ನು ಎದುರಿಸುವ ಸಂದರ್ಭದಲ್ಲಿ ಚೆಂಡು ಕುತ್ತಿಗೆಗೆ ಬಡಿದು ಮೃತಪಟ್ಟಿದ್ದರು. ಕಳೆದ ವರ್ಷ ಮೇನಲ್ಲಿ ಚೆಂಡು ಮರ್ಮಾಂಗಕ್ಕೆ ಬಿದ್ದು ಬಾಲಕನೊಬ್ಬ ಮೃತಪಟ್ಟಿದ್ದ ಘಟನೆ ಪುಣೆಯಿಂದ ವರದಿಯಾಗಿತ್ತು. ಇದೇ ವರ್ಷ ಮಾರ್ಚ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಬಿಸಿಲಿನ ತಾಪ ತಾಳಲಾರದೆ
ಕ್ರಿಕಟಿಗನೊಬ್ಬ ಮೃತಪಟ್ಟ ಘಟನೆ ನಡೆದಿತ್ತು.
ಜೂನ್ ನಲ್ಲಿ ಪಂಜಾಬ್ ನಲ್ಲಿ ಬ್ಯಾಟರ್ ಒಬ್ಬ ಸಿಕ್ಸರ್ ಹೊಡೆದ ಮರುಕ್ಷಣವೇ ಹೃದಯಾಘಾತವಾಗಿ ಕ್ರೀಸಿನಲ್ಲೇ ಕುಸಿದು ಮೃತಪಟ್ಟಿದ್ದ. ಅದೇ ರೀತಿ ಈ
ದುರಂತವೂ ಕ್ರಿಕೆಟ್ ಜಗತ್ತನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಪ್ರತಿಭಾವಂತ ಮತ್ತು ಜನಪ್ರಿಯ ಆಟಗಾರ ಬೆನ್ ಆಸ್ಟಿನ್ ಒಬ್ಬ “ಸ್ಟಾರ್ ಕ್ರಿಕೆಟಿಗ, ಉತ್ತಮ
ನಾಯಕ ಮತ್ತು ಅದ್ಭುತ ಯುವಕ” ಎಂದು ಕ್ಲಬ್ ಬಣ್ಣಿಸಿದೆ. ಅವನು ಮುಲ್ಗ್ರೇವ್ ಮತ್ತು ಎಲ್ಡನ್ ಪಾರ್ಕ್ ಕ್ರಿಕೆಟ್ ಕ್ಲಬ್ಗಳ ಪರವೂ ಆಡಿದ್ದಾನೆ. ಇನ್ನು ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಆಸ್ಟಿನ್ ನಿಧನಕ್ಕೆ ಸಂತಾಪ ಸೂಚಿಸಿದೆ. “ಮಂಗಳವಾರ ರಾತ್ರಿ ನೆಟ್ಸ್ ನಲ್ಲಿ ಬ್ಯಾಟಿಂಗ್ ಮಾಡುವಾಗ ಅಪಘಾತಕ್ಕೀಡಾದ ೧೭ ವರ್ಷದ ಮೆಲ್ಬೋರ್ನ್ ಕ್ರಿಕೆಟಿಗ ಬೆನ್ ಆಸ್ಟಿನ್ ಅವರ ನಿಧನದಿಂದ ಕ್ರಿಕೆಟ್ ಆಸ್ಟ್ರೇಲಿಯಾ ದುಃಖಿತವಾಗಿದೆ” ಎಂದು ಟ್ವೀಟ್ ಮಾಡಿದೆ.


 
		 
		 
		
 
		
 
    